ಬೆಂಗಳೂರು: ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರನ್ನು ಟಾರ್ಗೆಟ್ ಮಾಡಿ ಅವರಿಂದ ಹಣ ಹಾಗೂ ಚಿನ್ನ ಸುಲಿಗೆ ಮಾಡುತ್ತಿದ್ದ, ನಾಲ್ವರು ದರೋಡೆಕೋರರನ್ನು ಸಿಸಿಬಿಯ ಡಿಸಿಪಿ ರವಿ ನೇತೃತ್ವದ ತಂಡ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ಅಮರ್ ನಾಥ್, ಶಿವರಾಜ, ಶಾಂತರಾಜು ಹಾಗೂ ಶ್ರೀನಿವಾಸ್ ಎಂಬ ನಾಲ್ಕು ಜನ ಸುಲಿಗೆಕೋರರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇವರು ಬ್ಯಾಡರಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬಿಇಎಲ್ ಹತ್ತಿರ ಕತ್ತಲಲ್ಲಿ ನಿಂತುಕೊಂಡು, ಒಂಟಿಯಾಗಿ ಹೋಗುವ ಸಾರ್ವಜನಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ನಗದು ಚಿನ್ನಾಭರಣ ವಶಪಡಿಸಿಕೊಳ್ಳಲು ಯತ್ನ ಪಟ್ಟಿದ್ದಾರೆ. ಈ ವೇಳೆ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಇದರಲ್ಲಿ ಅಮರ್ ನಾಥ್ ಪ್ರಮುಖ ಆರೋಪಿಯಾಗಿದ್ದು, ಈತನ ಮೇಲೆ ಸಂಜಯನಗರ ಮತ್ತು ಕೊಡಿಗೆಹಳ್ಳಿ ಠಾಣೆಯಲ್ಲಿ ರಾಬರಿ ಕೇಸ್ ಮತ್ತು ಯಲಹಂಕ ಮತ್ತು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ. ಶಿವರಾಜ್ ಮೇಲೆ ತಾವರಕೆರೆ ಠಾಣೆಯಲ್ಲಿ ಕೊಲೆ ಕೇಸ್, ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದರೋಡೆ ಯತ್ನ ಪ್ರಕರಣ ದಾಖಲಾಗಿದೆ. ಸದ್ಯ ಸಿಸಿಬಿ ಪೊಲೀಸರು ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.