ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯಾಗ್ತಿದ್ದ ಹಾಗೆ ಸದ್ಯ ಡ್ರಗ್ ಪೆಡ್ಲರ್‍ಗಳ ಹಾವಳಿ ಮತ್ತೆ ಶುರುವಾಗಿದೆ. ನಗರದಲ್ಲಿ ವಿವಿಧ ರೀತಿಯ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳ ಬಂಧನ ಮಾಡುವಲ್ಲಿ ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಯಶಸ್ವಿಯಾಗಿದೆ.
ತಸ್ಲೀಮ್, ಮಹಮ್ಮದ್ ಅಮೀರ್, ಮನು ಥಾಮಸ್, ಹಸೀಬ್, ರಾಜೀಕ್, ಜೋಮನ್ ಬಂಧಿತ ಆರೋಪಿಗಳು. ಮೂಲತಃ ಕೇರಳದವರಾದ ಈ ಆರೋಪಿಗಳು ನಗರದ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ 6 ಜನ ಆರೋಪಿಗಳು ಸೇರಿಕೊಂಡು ಗಾಂಜಾ, ಎಂಡಿಎಂಎ, ಎಕ್ಟೆಸಿ ಮಾತ್ರೆಗಳು, ಎಲ್ಎಸ್ಡಿ ಪಿಲ್ಸ್ಗಳನ್ನು ಮನೆಯಲ್ಲಿಟ್ಟುಕೊಂಡು ವಿದ್ಯಾರ್ಥಿಗಳು, ಯುವಕರು, ಉದ್ಯೊಗಿಗಳಿಗೆ ಮಾರಾಟ ಮಾಡುತ್ತಿದ್ದರು.
ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ, ಕೇರಳಕ್ಕೆ ಹೋಗಿ ಅಲ್ಲಿಂದ ಅನ್ವರ್ ಎಂಬಾತನನ್ನು ಸಂಪರ್ಕ ಮಾಡಿಕೊಂಡು ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಮೊದಲೇ ನಿಗದಿಯಾದ ಗಿರಾಕಿಗಳಿಗೆ ಆರೋಪಿಗಳು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ.
ಸದ್ಯ 6 ಜನರನ್ನು ಬಂಧಿಸಿದ ಸಿಸಿಬಿ ಪೊಲೀಸರು ಆರೋಪಿಗಳ ಬಳಿಯಿಂದ 2 ಕೆ.ಜಿ ತೂಕದ ಗಾಂಜಾ, 20ಗ್ರಾಂ ಎಂಡಿಎಂಎ, 50ಎಕ್ಟೆಸಿ ಮಾತ್ರೆ, 20 ಎಲ್ಎಸ್ಡಿ ಪಿಲ್ಸ್ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ.