ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ಫೇಜ್ ಥ್ರೀ ಪಾರ್ಟಿ ಆಯೋಜನೆ ಮಾಡ್ತಿದ್ದ ಆರೋಪಿ ವಿರೇನ್ ಖನ್ನಾಗೆ ಸಂಕಷ್ಟ ಎದುರಾಗಿದೆ.
ಸಿಸಿಬಿ ಪೊಲೀಸರ ತನಿಖೆ ವೇಳೆ ವಿರೇನ್ ಖನ್ನಾ ಸರಿಯಾದ ಮಾಹಿತಿ ನೀಡುತ್ತಿಲ್ಲ. ತಮ್ಮ ಮೊಬೈಲ್ ಪಾಸ್ವರ್ಡ್ಅನ್ನು ಸಹ ಪೊಲೀಸರಿಗೆ ನೀಡದೆ ತನಿಖೆ ವೇಳೆ ಮೊಂಡುತನ ಪ್ರದರ್ಶನ ಮಾಡ್ತಿದ್ದ. ಹೀಗಾಗಿ ಸಿಸಿಬಿ ಪೊಲೀಸರು ನಾರ್ಕೋ ಟೆಸ್ಟ್ಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ.
ಸದ್ಯ ನಾರ್ಕೋ ಟೆಸ್ಟ್ಗೆ ಒಳಗಾಗುವ ವಿರೇನ್ ಖನ್ನಾ ಈವರೆಗೆ ಇದಕ್ಕೆ ಒಪ್ಪಿಲ್ಲ ಎನ್ನಲಾಗ್ತಿದೆ. ಡ್ರಗ್ಸ್ ಮಾಹಿತಿ ಮರೆಮಾಚಿದ ಹಿನ್ನೆಲೆ ತನಿಖೆ ದೊಡ್ಡ ತಿರುವು ಪಡೆದಿದ್ದು, ಆರೋಪಿ ಬಳಿಯಿಂದ ಮಹತ್ತರ ಮಾಹಿತಿ ಕಲೆ ಹಾಕುವುದು ಅನಿವಾರ್ಯವಾಗಿದೆ. ಸದ್ಯ ಬೆಂಗಳೂರಿನಲ್ಲಿ ನಾರ್ಕೋ ಟೆಸ್ಟ್ ಇಲ್ಲ. ಹೀಗಾಗಿ ಅಹಮದಾಬಾದ್ ಅಥವಾ ಹೈದರಾಬಾದ್ಗೆ ಆತನನ್ನು ಕರೆದೊಯ್ಯುವ ನಿರ್ಧಾರವನ್ನು ಸಿಸಿಬಿ ಪೊಲೀಸರು ಮಾಡಿದ್ದಾರೆ.
ವಿರೇನ್ ಖನ್ನಾ, ನಟಿ ರಾಗಿಣಿ ಹಾಗೂ ನಟಿ ಸಂಜನಾ ಜೊತೆ ಸೇರಿ ದೊಡ್ಡ-ದೊಡ್ಡ ಪಾರ್ಟಿ ಬೆಂಗಳೂರಿನಲ್ಲಿ ಮಾಡಿ ಹಲವಾರು ಮಂದಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂಬ ಆರೋಪವಿದೆ. ಹಾಗೆ ಇವರ ಜೊತೆ ಇನ್ನಷ್ಟು ಪ್ರತಿಷ್ಠಿತ ಸ್ಟಾರ್ ನಟ-ನಟಿಯರು ಇದ್ದಾರೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ವಿರೇನ್ ಖನ್ನಾ ಯಾವುದೇ ಮಾಹಿತಿಗಳನ್ನ ಬಿಚ್ಚಿಡ್ತಿಲ್ಲ. ಅಷ್ಟು ಮಾತ್ರವಲ್ಲದೇ ವಿರೇನ್ ಖನ್ನಾ ನಗರದಲ್ಲಿ ಹೊಂದಿರುವ ಫ್ಲಾಟ್ ಮೇಲೆ ದಾಳಿ ನಡೆಸಿದಾಗ ಪೊಲೀಸ್ ಸ್ಟಾರ್ ಇರುವ ಯುನಿಫಾರ್ಮ್, ಹಾಗೆ ಕೆಲ ವಿದೇಶಿ ಕರನ್ಸಿಗಳು ಸಹ ಸಿಕ್ಕಿದ್ದವು.
ಪೊಲೀಸರು ವಿಚಾರಣೆ ನಡೆಸಿದ್ರೂ ಕೂಡ ಸರಿಯಾದ ಮಾಹಿತಿ ನೀಡದ ಹಿನ್ನೆಲೆ ನಾರ್ಕೋ ಟೆಸ್ಟ್ ಮೂಲಕ ಸತ್ಯ ಕಂಡು ಹಿಡಿಯುವ ತಂತ್ರ ಇದಾಗಿದೆ. ಆದರೆ ಇಲ್ಲಿ ಆರೋಪಿಯ ಅನುಮತಿ ಕೂಡ ಮುಖ್ಯವಾಗಿದೆ. ,ಸದ್ಯ ಸಿಸಿಬಿ ಪೊಲೀಸರು ವಿರೇನ್ ಖನ್ನಾನನ್ನು ಒಪ್ಪಿಸುವ ಕೆಲಸ ಮಾಡ್ತಿದ್ದಾರೆ.