ಬೆಂಗಳೂರು: ಅನಧಿಕೃತವಾಗಿ ತಂಬಾಕು ದಾಸ್ತಾನಿರಿಸಿದ್ದ ಕಂಪನಿ ಮೇಲೆ ದಾಳಿ ಮಾಡಿ, ಬಳಿಕ ಪ್ರಕರಣ ಮುಚ್ಚಿ ಹಾಕಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಎಸಿಪಿ ಪ್ರಭುಶಂಕರ್ ಅವರನ್ನು ಅಮಾನತು ಮಾಡಲಾಗಿದೆ.
ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿ ಬರುತ್ತಿದ್ದಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ರವಿಕುಮಾರ್ಗೆ ಸೂಚನೆ ನೀಡಿದ್ದರು. ಇದೀಗ ತನಿಖಾ ವರದಿ ಕೈ ಸೇರಿದ್ದು, ವರದಿ ಆಧರಿಸಿ ಗೃಹ ಇಲಾಖೆ ಎಸಿಪಿ ಪ್ರಭು ಶಂಕರ್ ಅವರನ್ನು ಅಮನತು ಮಾಡಿದೆ.
ಏನಿದು ಪ್ರಕರಣ..?
ಲಾಕ್‌ಡೌನ್ ಹಿನ್ನೆಲೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿಲಾಗಿದೆ. ಹೀಗಿದ್ದರೂ, ನಗರದ ಆನಂದಪುರದ ರಮೇಶ್ ಎಂಬಾತ ಐಟಿಸಿ ಕಂಪೆನಿಯ ಸಿಗರೇಟ್ನ್ನು ಟಿಸಿಎಸ್ ಮತ್ತು ದೊಡ್ಡನೆಕ್ಕುಂದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅನಧಿಕೃತವಾಗಿ ದಾಸ್ತಾನಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಎಸಿಪಿ ಪ್ರಭುಶಂಕರ್, ಏ.30ರಂದು ಕಂಪನಿ ಮೇಲೆ ದಾಳಿ ನಡೆಸಿ 12 ಲಕ್ಷ ಬೆಲೆ ಬಾಳುವ 12 ಕಾರ್ಟನ್ ಬಾಕ್ಸ್ ಸಿಗರೇಟ್ ವಶಪಡಿಸಿಕೊಂಡಿದ್ದರು. ನಿಷೇಧದ ನಡುವೆಯೂ ಸಿಗರೇಟ್ ಮಾರಾಟ ಮಾಡಿದ್ದಕ್ಕಾಗಿ ಕಂಪನಿ ಮಾಲೀಕನ ವಿರುದ್ಧ ದೂರು ದಾಖಲಾಗಿತ್ತು.
ಬಳಿಕ ಎಸಿಪಿ ಪ್ರಭು ಶಂಕರ್ಗೆ ಈ ಕುರಿತು ಪ್ರಕರಣ ದಾಖಲಿಸಬಾರದೆಂದು ಕಂಪೆನಿ ಮಾಲೀಕ ಲಂಚ ಕೊಡಲು ಮುಂದಾಗಿದ್ದ. ಈ ವೇಳೆ ಎಸಿಪಿ ಪ್ರಭು ಶಂಕರ್ ಪ್ರಕರಣ ಮುಚ್ಚಿ ಹಾಕಲು 65 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮುಂಗಡವಾಗಿ 20 ಲಕ್ಷ ರೂ. ತಂಬಾಕು ಕಂಪೆನಿ ಮಾಲೀಕ ಎಸಿಪಿಗೆ ಕೊಟ್ಟಿದ್ದರೂ, ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದ್ದು, ಈ ಕುರಿತು ಕಂಪನಿ ಮಾಲೀಕ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದ.