ಬೆಂಗಳೂರು: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಇರುವ ಹಿಂದುತ್ವ ವಿರೋಧಿ ಆರೋಪವನ್ನು ಡೈವರ್ಟ್ ಮಾಡಲು ಕಾಮಗ್ರೆಸ್ನವರು ಕೆಂಪಣ್ಣ ಮೂಲಕ ಕಮಿಷನ್ ಆರೋಪ ಮಾಡಿಸಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೆಂಪಣ್ಣ ಹಾಗೂ ಅವರ ಸಂಘದ ಸದಸ್ಯರ ಜೊತೆ ಈ ಹಿಂದೆ ಮಾತನಾಡಿದ್ದರು. ಪ್ಯಾಕೇಜ್ ಪದ್ಧತಿ ಕೈಬಿಡಬೇಕೆಂಬುದೂ ಸೇರಿದಂತೆ ಕೆಂಪಣ್ಣ ಕೆಲವು ಸಲಹೆ ಕೊಟ್ಟಿದ್ದರು. ಟೆಂಡರ್ ಪರಿಶೀಲನೆ ಸಮಿತಿ ಸೇರಿದಂತೆ ಅವರ ಬಹುತೇಕ ಬೇಡಿಕೆಯನ್ನು ಸಿಎಂ ಒಪ್ಪಿದ್ದರು. ಆದರೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ನಾಯಕರು ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹಲವು ಹಿಂದುತ್ವ ವಿರೋಧಿ ಹೇಳಿಕೆಗಳು ಬಂದವು. ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರು. ಮಡಿಕೇರಿಯಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಭಾರಿ ಚರ್ಚೆ ಆಯಿತು. ಈ ಹಿನ್ನೆಲೆಯಲ್ಲಿ ಎಲ್ಲಾ ವಿಚಾರವನ್ನು ದೂರ ಮಾಡಲು ಮಾಡಲು ಸಿದ್ದರಾಮಯ್ಯರ ಮನೇಲಿ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಕೆಂಪಣ್ಣ ಮೂಲಕ ಕಮಿಷನ್ ಆರೋಪ ಮಾಡಿಸಿದ್ದಾರೆ ಎಂದು ತಿಳಿಸಿದರು.
ನನ್ನ ವಿರುದ್ಧ ಗುತ್ತಿಗೆದಾರದ ಸಂಘ ಒಡೆಯುವ ಪ್ರಯತ್ನದ ಆರೋಪ ಮಾಡಿದ್ದಾರೆ. ಉತ್ತರ ಕರ್ನಾಟಕದ ಗುತ್ತಿಗೆದಾರ ಸಂಘ ಆರಂಭ ಆಗಿದ್ದು 2013 ರಲ್ಲಿ. ನಾನು ಸಚಿವರಾಗಿದ್ದು ಮೂರು ವರ್ಷದ ಹಿಂದೆ. ಇನ್ನೊಂದು ಸಂಘ ಇರಬಾರದು ಎಂಬ ಮನಸ್ಥಿತಿ ಏಕೆ ಎಂಬುದಕ್ಕೆ ಕೆಂಪಣ್ಣ ಉತ್ತರ ಕೊಡಬೇಕು.
ಕೆಂಪಣ್ಣ ಚುನಾವಣೆ ಎದುರಿಸಿ ಅಧ್ಯಕ್ಷರಾದವರಲ್ಲ. ಎಷ್ಟು ಜನ ಇವರ ಪರ ಗುತ್ತಿಗೆದಾರರಿದ್ದಾರೆ? ಈ ಹಿಂದೆ ಅವರು ನನ್ನನ್ನು ಭೇಟಿ ಮಾಡಿ ಒಂದು ಪತ್ರ ನೀಡಿದ್ದರು. ಅಸಾಂವಿಧಾನಿಕ ಪದ ಯಾಕೆ ಬಳಸಿದ್ದೀರಾ ಅಂತಾ ನಾನು ಪ್ರಶ್ನಿಸಿದ್ದೆ. ಆಗ ಅವರು ನನಗೆ ಜ್ಞಾಪಕ ಇಲ್ಲ ಯಾರೋ ಬರೆದುಕೊಟ್ಟರು ಅಂತಾ ಹೇಳಿದರು. ಇವರು ಯಾರದ್ದೋ ಮಾತಿನ ಮೇಲೆ ಆರೋಪ ಮಾಡ್ತಿದ್ದಾರೆ. ನಿರ್ದಿಷ್ಟ ದಾಖಲೆಗಳಿದ್ದರೆ ಲೋಕಾಯುಕ್ತ ಅಥವಾ ಎಸಿಬಿಗೆ ಕೊಡಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಂಪಣ್ಣ ಅವರಿಂದ ಕಮಿಷನ್ ಆರೋಪ: ಕಾರಜೋಳ