ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯೋಗೀಶ್ಗೌಡ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣ ಸಂಬಂಧ ಎಂಟು ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಿ ಧಾರವಾಡದ ನಾಲ್ಕನೇ ಹೆಚ್ಚುವರಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತೋಷ್ ಸವದತ್ತಿ, ಸುನಿಲ್, ಹರ್ಷಿತ್, ಅಶ್ವಥ್, ನಜೀರ್ ಅಹಮದ್, ಶಹವಾಜ್ ಹಾಗೂ ನೂತನ್ ಎಂಬುವವರ ಹೆಸರುಗಳು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಯೋಗೀಶ್ಗೌಡನನ್ನು ಧಾರವಾಡದ ಸಪ್ತಾಪುರ ಉದಯ್ ಜಿಮ್ ಮುಂದೆ ಆರೋಪಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು. ಈ ಸಂಬಂಧ ಧಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರು ಮಂದಿ ಆರೋಪಿಗಳನ್ನು ಬಂಧಿಸಿಲಾಗಿತ್ತು. ಕೊಲೆ ಮಾಡಿದ ಆರೋಪಿಗಳು ಸುಪಾರಿ ಹಂತಕರು ಆಗಿದ್ದರು.
ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಸಿಬಿಐ ವಹಿಸಿ ಆದೇಶಿತ್ತು. ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ಸಿನಿಮೀಯ ಮಾದರಿಯಲ್ಲಿ ಮತ್ತಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಪ್ರಕರಣದಲ್ಲಿ ಎಂಟು ಆರೋಪಿಗಳಲ್ಲಿ ಏಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು ಮತ್ತೋರ್ವ ಆರೋಪಿ ಜಾಮೀನಿನ ಮೇಲೆ ಹೊರಗಿದ್ದಾರೆ.