ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿವಾದ, ಕೇಂದ್ರ ಸರ್ಕಾರದ ಮುಂದೆ ಬಾಕಿಯಿರುವ ರಾಜ್ಯದ ಯೋಜನೆಗಳು ಹಾಗೂ ಬರ ಪರಿಹಾರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ನಾಳೆ ಬೆಳಗ್ಗೆ ಮಹತ್ವದ ಸರ್ವ ಪಕ್ಷ ಸಭೆ ನಡೆಯಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಕಾವೇರಿ ವಿವಾದ, ಬರ ಪರಿಹಾರ ಸಂಬಂಧ ಕೇಂದ್ರ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜ್ಯ ಪ್ರತಿನಿಧಿಸುವ ಕೇಂದ್ರದ ಸಚಿವರುಗಳು, ಲೋಕಸಭಾ ಸದಸ್ಯರು ಹಾಗೂ ರಾಜ್ಯ ಸಭಾ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಂಜೆಯೇ ನವದೆಹಲಿಗೆ ತೆರಳಲಿದ್ದಾರೆ.
ಕರ್ನಾಟಕದ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ನಾಳೆ ನಡೆಯಲಿರುವ ಮಹತ್ವದ ಸಭೆಗೆ ಕರ್ನಾಟಕ ಭವನದಲ್ಲಿ ಪೂರ್ವಭಾವಿ ಚರ್ಚೆ ಮಾಡುತ್ತಿದ್ದಾರೆ. ಈಗಾಗಲೇ ಕಾವೇರಿ ವಿವಾದ ಸಂಬಂಧ ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಲಾಗಿದ್ದು, ಅವಕಾಶ ಸಿಕ್ಕರೆ ನಾಳೆ ಪ್ರಧಾನಿ ಮೋದಿ ಭೇಟಿಯಾಗುವ ಸಾಧ್ಯತೆ ಇದೆ. ಆದರೆ, ಕಾವೇರಿ ವಿವಾದ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿರುವ ಹಿನ್ನೆಲೆ ಪ್ರಧಾನಿ ಮಧ್ಯಪ್ರವೇಶ ಮಾಡುವುದು ಅನುಮಾನವಾಗಿದೆ.
ಇತ್ತ ಬರ ಸಂಬಂಧ ಕೇಂದ್ರ ಸರ್ಕಾರದ ಕಠಿಣ ಮಾನದಂಡ ಸಡಿಲಿಸುವ ಸಂಬಂಧವೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಈ ಸಂಬಂಧವೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಈಗಾಗಲೇ 195 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಶೀಘ್ರ ಬರ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಲಿದ್ದಾರೆ.
ರೈತರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ.. ಕುರುಬೂರು ಶಾಂತಕುಮಾರ್ : ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಕದ್ದು ಮುಚ್ಚಿ ನೀರು ಬಿಟ್ಟಿದೆ. ಚುನಾವಣೆ ಸಂಬಂಧ ರಾಜ್ಯ ಸರ್ಕಾರ ತಮಿಳುನಾಡಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಮೂಲಕ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಪಿಡಬ್ಲ್ಯೂಡಿ ಗೆಸ್ಟ್ ಹೌಸ್ನಲ್ಲಿ ಸಭೆ ನಡೆಸಿದ ರೈತ ಮುಖಂಡರು ಸರ್ಕಾರದ ಕ್ರಮವನ್ನು ಖಂಡಿಸಿದರು. ಈ ಕೂಡಲೇ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಇದೇ ವೇಳೆ ಒತ್ತಾಯಿಸಿದರು.
ಇದನ್ನೂ ಓದಿ : ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಯೊಂದಿಗೆ ಚರ್ಚೆಗೆ ಬಿಜೆಪಿ ಮುಖಂಡರು ಸಮಯ ನಿಗದಿಪಡಿಸಲಿ: ಸಚಿವ ಎಂ ಬಿ ಪಾಟೀಲ್