ಬೆಂಗಳೂರು: ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ಕೈಗೊಂಡಿರುವ ಕಾವೇರಿ ಕೂಗು ಅಭಿಯಾನಕ್ಕೂ ಮತ್ತು ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸುವ ಕುರಿತು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಾವೇರಿ ಕೂಗು ಅಭಿಯಾನ ಹೆಸರಲ್ಲಿ ಈಶ ಫೌಂಡೇಷನ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕುಸಿದು ಬಿದ್ದ ಸಾಲುಮರದ ತಿಮ್ಮಕ್ಕ... ಸೊಂಟದ ಮೂಳೆ ಮುರಿತ
ಕೆಲಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಸರ್ಕಾರದ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿರುವುದಾಗಿ ಈಶ ಫೌಂಡೇಷನ್ ಬಿಂಬಿಸಿಕೊಳ್ಳುತ್ತಿದೆ ಎಂಬುದು ಅರ್ಜಿದಾರರ ಆರೋಪ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯೋಜನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ವಿವಾದಗಳನ್ನು ಕೊನೆಗೊಳಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿತು. ಹಾಗೆಯೇ ಈ ಕುರಿತು ಡಿಸೆಂಬರ್ 9ರ ಒಳಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಕಾವೇರಿ ಕೂಗು ಅಭಿಯಾನಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ಕ್ರಮ ಆಕ್ಷೇಪಿಸಿ ವಕೀಲ ಎ. ವಿ. ಅಮರನಾಥನ್ ಪಿಐಎಲ್ ಸಲ್ಲಿಸಿದ್ದರು. ಆದರೆ ಕಾರಣಾಂತರಗಳಿಂದ ಹೈಕೋರ್ಟ್ ಅರ್ಜಿದಾರರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಅರ್ಜಿಯನ್ನು ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿದೆ.