ಬೆಂಗಳೂರು : ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ವರದಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಅಲಹಳ್ಳಿ ಅಂಜನಾಪುರದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಮಹೋತ್ಸವ ಸಮಾರಂಭ ಮತ್ತು ಗಾಣಿಗ ಜನಾಂಗದ ಸಮಾವೇಶ, ನೂತನ ಕಟ್ಟಡ ಬ್ಲಾಕ್-1 ಉದ್ಘಾಟನೆ ಹಾಗೂ ಬ್ಲಾಕ್ -2 ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವರದಿಯನ್ನು ಇನ್ನೂ ನಾವು ಸ್ವೀಕಾರ ಮಾಡಿಲ್ಲ. ವರದಿ ಸ್ವೀಕರಿಸಲೆಂದೇ ಆಯೋಗದ ಅವಧಿಯನ್ನು 2 ತಿಂಗಳು ಮುಂದುವರೆಸಲಾಗಿದೆ. ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲ : ಯಾರೂ ಏನೇ ಹೇಳಿದರೂ ಸಾಮಾಜಿಕ ನ್ಯಾಯದಲ್ಲಿ ರಾಜಿ ಇಲ್ಲದೇ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಸಮಾಜದಲ್ಲಿ ಅವಕಾಶ ವಂಚಿತ ಜನರಿಗೆ, ಶತಶತಮಾನಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವವರು, ಸಾಮಾಜಿಕ ನ್ಯಾಯದಿಂದ ಇಂದಿಗೂ ವಂಚಿತರಾದ ಜನರ ಪರವಾಗಿ ನಾವು ಇರುತ್ತೇವೆ. ನಿಮ್ಮೊಂದಿಗೂ ಇರುತ್ತೇವೆ ಎಂದರು.
ಗಾಣಿಗ ಸಮಾಜದವರು ಎಣ್ಣೆ ಉತ್ಪಾದನೆಯ ವೃತ್ತಿ ಮಾಡುತ್ತಿದ್ದವರು. ಇತ್ತೀಚಿನ ವರ್ಷಗಳಲ್ಲಿ ಕೈಗಾರೀಕರಣವಾದ ನಂತರ, ಎಣ್ಣೆ ತಯಾರಿಸುವ ವೃತ್ತಿಯನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಅನೇಕರು ಇದರಿಂದ ನಿರುದ್ಯೋಗಿಗಳಾಗಿದ್ದಾರೆ. ಈ ಸಮಾಜದಲ್ಲಿ ಜಮೀನು ಹೊಂದಿದವರು ಬಹಳ ಕಡಿಮೆ, ಸಣ್ಣ ರೈತರು ಬಹಳ ಕಡಿಮೆ ಇದ್ದಾರೆ ಎಂದರು.
ಗಾಣಿಗರ ನಿಗಮ ಸ್ಥಾಪನೆ, ವಿಶ್ವಕರ್ಮ ಯೋಜನೆಯಡಿ ಗಾಣಿಗರನ್ನು ಬಿಟ್ಟಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಹಲವರು ಮನವಿ ಮಾಡಿದ್ದಾರೆ. ನಿಮ್ಮ ಸಮಾಜಕ್ಕೆ ಸೇರಿದ ಪ್ರಧಾನಿಗಳಿಗೆ ನಿಮ್ಮ ಸಮಸ್ಯೆ ಗೊತ್ತಿದೆಯೋ ಗೊತ್ತಿಲ್ಲ. ಆದರೆ, ನಾನು ಕೂಡಲೇ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಸಂವಿಧಾನದ ಆಶಯಗಳನ್ನು ಎಲ್ಲಾ ಸಮುದಾಯಕ್ಕೆ ತಲುಪಿಸಲು ಜಾತಿಗಣತಿ : ಪ್ರತಿಯೊಂದು ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲ ಸಮುದಾಯಗಳಿಗೂ ತಲುಪಿಸಲು ಜಾತಿ ಗಣತಿ ಆರಂಭಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಗುರುವಾರ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿ ವಿತರಿಸಿದರು. ಬಳಿಕ ಮಾತನಾಡಿದ್ದ ಅವರು ಅಂಬೇಡ್ಕರ್ ಹೇಳಿದ್ದ ಎಚ್ಚರಿಕೆ ಮಾತುಗಳನ್ನು ಮರೆಯಬಾರದು. ಜಾತಿ ಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದರು.
ಇದನ್ನೂ ಓದಿ : ಅವೈಜ್ಞಾನಿಕ ಜಾತಿಗಣತಿಗೆ ನಮ್ಮ ವಿರೋಧ ಇದೆ: ಶಾಮನೂರು ಶಿವಶಂಕರಪ್ಪ