ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಸಂವಿಧಾನದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಶಾಸಕ ಎನ್. ಮಹೇಶ್, ಇತಿಹಾಸದ ಹಲವು ಅಂಶಗಳನ್ನು ಉಲ್ಲೇಖಿಸಿ ಪ್ರತಿಪಾದಿಸಿದರು.
ಈ ದೇಶವನ್ನು ಟರ್ಕರು, ಅರಬ್ಬರು, ಮೊಘಲರು ಸುಮಾರು ಎಂಟು ಶತಮಾನಗಳ ಆಳಿದರು. ಆದರೆ ಅವರ ಕಾಲದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಏಕೆ ಮೊಳೆಯಲಿಲ್ಲ? ಬ್ರಿಟೀಷರ ಕಾಲದಲ್ಲೇಕೆ ಮೊಳೆಯಿತು? ಎಂದು ಪ್ರಶ್ನಿಸಿದರು.
ಬ್ರಿಟೀಷರು ದೇಶಕ್ಕೆ ಬಂದ ನಂತರ 1835 ರಲ್ಲಿ ಈ ದೇಶದ ಎಲ್ಲರಿಗೂ ಶಿಕ್ಷಣದ ಅವಕಾಶ ಕಲ್ಪಿಸಿಕೊಟ್ಟರು. ಇದೇ ರೀತಿ ಹಲವು ವಿಷಯಗಳಲ್ಲಿ ಮನುವಾದಿಗಳ ಬುಡ ಅಲುಗಾಡಿಸಿದರು. ಪರಿಣಾಮವಾಗಿ ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ಮೊಳಕೆಯೊಡೆಯಿತು. ಬ್ರಿಟೀಷರ ಜಾಗಕ್ಕೆ ಬಂದು ಕೂರಲು ಮನುವಾದಿಗಳು ಹೊರಟರು ಎಂದು ವಿವರ ನೀಡಿದರು.
ಇದನ್ನು ಓದಿ: ಸಾರ್ವಜನಿಕ ಜೀವನದ ಮೌಲ್ಯಗಳು ನಶಿಸುತ್ತಿವೆ: ಶಾಸಕ ಅರಗ ಜ್ಞಾನೇಂದ್ರ ಕಳವಳ
ಈ ದೇಶದಲ್ಲಿ ಜಾತಿ ವ್ಯವಸ್ಥೆ ಎಂಬುದು ಇರಲಿಲ್ಲ. ಬದಲಿಗೆ ಉತ್ಪಾದನೆಯ ಘಟಕಗಳಾಗಿ ಜನ ಜೀವನ ನಡೆಯುತ್ತಿತ್ತು. ಮಡಿಕೆ ಮಾಡುವವನು ಮೇಷ್ಟ್ರಾಗಬಹುದಿತ್ತು. ಚಪ್ಪಲಿ ಹೊಲಿಯುವವನು ಇನ್ನೇನೋ ಆಗಬಹುದಿತ್ತು. ಆದರೆ ಗುಪ್ತರ ಕಾಲದಲ್ಲಿ, ವಿಶೇಷವಾಗಿ ಸಮುದ್ರಗುಪ್ತನ ಕಾಲದಲ್ಲಿ ಜಾತಿ ವ್ಯವಸ್ಥೆ ತಲೆ ಎತ್ತಿತು ಎಂದರು.
ಆರಂಭದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ಮಾತ್ರ ಇದ್ದರು. ಶೂದ್ರರು ಇರಲಿಲ್ಲ. ಆದರೆ ಯಾವಾಗ ಬ್ರಾಹ್ಮಣ ಮೇಲೋ?.. ಕ್ಷತ್ರಿಯ ಮೇಲೋ?.. ಎಂಬ ಪ್ರಶ್ನೆ ಎದುರಾದಾಗ ಶೂದ್ರರು ಸೃಷ್ಟಿಯಾದರು. ಮೂಲದಲ್ಲಿ ಇವರು ಕ್ಷತ್ರಿಯರೇ ಎಂದು ಅವರು ಪ್ರತಿಪಾದಿಸಿದರು.
ಮೂಲದಲ್ಲಿ ಜಂಗಮ ಸ್ಥಿತಿಯಲ್ಲಿದ್ದ ಭಾರತ ಚಾತುರ್ವರ್ಣ ಪದ್ಧತಿ ಜಾರಿಗೆ ಬಂದ ಮೇಲೆ ಜಡವಾಯಿತು. ಹೀಗೆ ಜಡಗೊಂಡ ವ್ಯವಸ್ಥೆಗೆ ಚಲನಶೀಲತೆ ತರಲು ಅಂಬೇಡ್ಕರ್ ವಿರಚಿತ ಸಂವಿಧಾನ ಬರಬೇಕಾಯಿತು ಎಂದರು.
ಒಂದು ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಪೆರಿಯಾರ್ ಅವರ ಬಳಿ ಯಾರೋ ಕೇಳುತ್ತಾರೆ. ಬ್ರಹ್ಮನ ತಲೆಯಿಂದ ಬ್ರಾಹ್ಮಣರು ಜನಿಸಿದರು. ಭುಜದಿಂದ ಕ್ಷತ್ರಿಯರು ಜನಿಸಿದರು. ಹೊಟ್ಟೆಯಿಂದ ವೈಶ್ಯರು ಜನಿಸಿದರು. ಪಾದದಿಂದ ಶೂದ್ರರು ಜನಿಸಿದರು. ಹಾಗಿದ್ದರೆ ನಾವು ದಲಿತರು ಹೇಗೆ ಹುಟ್ಟಿದೆವು? ಅಂತ ಪ್ರಶ್ನಿಸುತ್ತಾರೆ. ಆಗ ಪೆರಿಯಾರ್ ಅವರು ಈ ನಾಲ್ಕೂ ಸಮುದಾಯದವರು ಹುಟ್ಟಬಾರದ ಜಾಗದಿಂದ ಹುಟ್ಟಿದ್ದಾರೆ. ಹೀಗಾಗಿ ದಲಿತರು ಹುಟ್ಟಬೇಕಾದ ಜಾಗದಿಂದ ಹುಟ್ಟಿದ್ದಾರೆ ಎಂದು ಮಹೇಶ್ ಅವರು ಹೇಳಿದಾಗ ಸದನ ಮೂಕವಿಸ್ಮಿತವಾಗಿ ಆಲಿಸುತ್ತಿತ್ತು.
ಇದನ್ನು ಓದಿ: ಸಂಸತ್ನಲ್ಲಿ ಆರ್ಥಿಕ ದಿವಾಳಿ ತಡೆ ವಿಧೇಯಕ ಮಂಡನೆ... ಹೊಸ ನೀತಿ ಜಾರಿಗೊಳಿಸಲು ನಿರ್ಧಾರ!
ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ಸಂದರ್ಭದಲ್ಲಿ ಈ ದೇಶ ಯಾವಾಗ ಸಹೋದರತ್ವದ ಆಧಾರದ ಮೇಲೆ ನಿಲ್ಲುತ್ತದೋ? ಯಾವಾಗ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ಹೊಂದುತ್ತದೋ? ಆಗ ಈ ದೇಶ ಮೇಲೆದ್ದು ನಿಲ್ಲುತ್ತದೆ ಎಂದು ಹೇಳಿದ್ದರು. ಆದರೆ ಈ ದೇಶದ ಶೇ ಒಂದರಷ್ಟು ಜನರ ಕೈಲಿ ಶೇ ಐವತ್ತೊಂಭತ್ತರಷ್ಟು ಸಂಪತ್ತು ಕೇಂದ್ರೀಕೃತಗೊಂಡಿದೆ. ಜಾಗತೀಕರಣ ಜಾರಿಗೆ ಬಂದ ಕಾಲಘಟ್ಟದಲ್ಲಿ ದೇಶದ ಬಹುಸಂಖ್ಯಾತರಾದ ಪರಿಶಿಷ್ಟರ ಪೈಕಿ ಶೇ ತೊಂಭತ್ತರಷ್ಟು ಜನ ಕೃಷಿ ಕೂಲಿ, ಕಾರ್ಮಿಕರಾಗಿ ಉಳಿದಿದ್ದಾರೆ ಎಂದು ವಿಷಾದಿಸಿದರು.
ಯಾವಾಗ ಈ ದೇಶದಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರೆಯುತ್ತದೋ? ಆಗ ಈ ದೇಶ ಸುಸ್ಥಿತಿಗೆ ಬರುತ್ತದೆ ಎಂದ ಅವರು ಸಂವಿಧಾನ ಜಾರಿಗೆ ಬಂದ ನಂತರ ಜಾತಿ ವ್ಯವಸ್ಥೆಯ ಕಹಿ ಕಡಿಮೆಯಾಗುತ್ತಿದೆ ಎಂದರು.
ಪರಿಶಿಷ್ಟರು ಇವತ್ತು ಸವರ್ಣೀಯರ ದೇವಾಲಯಗಳಿಗೆ ಪ್ರವೇಶವಿಲ್ಲ ಎಂದರೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದ ಅವರು ಕರ್ನಾಟಕದಲ್ಲಿ ಬೋರ್‍ವೆಲ್‍ಗಳು ಬಂದ ಕಾಲದಲ್ಲಿ ಸವರ್ಣೀಯ ಹೆಣ್ಣು ಮಕ್ಕಳು ದಲಿತರು ನೀರು ತೆಗೆದುಕೊಂಡು ಹೋಗುತ್ತಾರೆ ಎಂದು ಬೋರ್‍ವೆಲ್‍ಗಳಿಗೆ ಹುಣಸೆಹಣ್ಣು, ಉಪ್ಪು ತಿಕ್ಕುವ ಸ್ಥಿತಿ ಇತ್ತು. ಇವತ್ತಿಗೂ ಜಾತಿ ವ್ಯವಸ್ಥೆಯ ಕಹಿ ಉಳಿದಿದೆ. ಅದು ಮುಂಚಿನಷ್ಟು ಅಲ್ಲದಿದ್ದರೂ ನಿರಾತಂಕವಾಗಿ ಉಳಿದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.