ಬೆಂಗಳೂರು : ನಗರದಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ಒಂದೇ ದಿನ 17 ಪ್ರಕರಣ ದಾಖಲಿಸಿ, 28 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ವ್ಹೀಲಿಂಗ್ ಮಾಡುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಫ್ಯಾಷನ್‌ಗಾಗಿ ಎಲ್ಲೆಂದರಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿತ್ತು. ಅಲ್ಲದೆ ವಾಹನ ಸವಾರರಿಂದಲೂ ವ್ಯಾಪಕ ದೂರು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡ ಸಂಚಾರಿ ಪೊಲೀಸರು 17 ಪ್ರಕರಣ ದಾಖಲಿಸಿಕೊಂಡು, 28 ಬೈಕ್ ಜಪ್ತಿ ಮಾಡಿ 31 ಬೈಕ್ ಸವಾರರನ್ನು ಬಂಧಿಸಿದ್ದಾರೆ.
ಬಂಧಿತ ಬೈಕ್ ಸವಾರರ ಪರವಾನಗಿ ಅಮಾನತಿಗಾಗಿ ಆರ್ಟಿಒಗೆ ಮಾಹಿತಿ ಕಳುಹಿಸಲಾಗಿದೆ. ಇನ್ನೊಂದೆಡೆ ಪೋಷಕರನ್ನು ಕರೆಸಿ ಮಕ್ಕಳಿಗೆ ಬುದ್ಧಿವಾದ ಹೇಳುವಂತೆ ತಿಳಿಸಿದ್ದು, ಮುಂದಿನ ಬಾರಿ ಇಂತಹ ದುಸ್ಸಾಹಕ್ಕೆ ಕೈ ಹಾಕಬಾರದೆಂದು ಎಚ್ಚರಿಕೆ ಕೊಟ್ಟು ಕಳುಹಿಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.