ಬೆಂಗಳೂರು : ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗೆ ತಾಯಿ ಭೇಟಿ ಮಾಡಲು ಹೈಕೋರ್ಟ್ ಅವಕಾಶ ನೀಡಿದೆ .
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎರಡನೇ ಆರೋಪಿ ಕೇಶವ ಕೋಟೇಶ್ವರಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಸ್ಫೂರ್ತಿಧಾಮ ಅನಾಥಾಶ್ರಮದ ಕಾರ್ಯ ನಿರ್ವಹಣಾಧಿಕಾರಿ ಕೇಶವ ಕೊಟೇಶ್ವರ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಏಕಸದಸ್ಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಕೋಟೆಶ್ವರ ಬಂಧನದಿಂದ 83 ವರ್ಷದ ವೃದ್ಧ ತಾಯಿ ಮಾನಸಿಕ ಖಿನ್ನತೆಗೆ ಗುರಿಯಾಗಿದ್ದು, ಸರಿಯಾಗಿ ಆಹಾರ ಸೇವನೆ ಮಾಡುತ್ತಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಜಾಮೀನು ನೀಡಲು ಸಾಧ್ಯವಿಲ್ಲ. ಆರೋಪಿಯನ್ನ ಪೊಲೀಸ್ ಭದ್ರತೆ ಪಡೆಯೊಂದಿಗೆ ತಾಯಿಯನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಿ ಎಂದು ರಾಜ್ಯ ಸರ್ಕಾರದ ಪ್ರಾಸಿಕ್ಯೂಟರ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ ಹೈಕೋರ್ಟ್.
ಪ್ರಕರಣದ ಹಿನ್ನೆಲೆ -
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಅನಾಥಾಶ್ರಮದಲ್ಲಿ ಬಾಲಕಿಯರ ಮೇಲೆ ಹನುಮಂತ ಎಂಬಾತ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಹೀಗಾಗಿ ಈತನನ್ನ ಸ್ಥಳೀಯ ಪೊಲೀಸರು ಬಂಧಿಸಿದ್ರು. ಆದರೆ, ಸ್ಫೂರ್ತಿಧಾಮ ಅನಾಥಾಶ್ರಮದ ಕಾರ್ಯನಿರ್ವಹಣಾಧಿಕಾಧಿಕಾರಿ ಕೋಟೇಶ್ವರ ವಿಚಾರ ತಿಳಿದು ಮೌನ ವಹಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಪೊಲೀಸರು 2019ರ ಮಾರ್ಚ್ 14ರಂದು ಬಂಧಿಸಿದ್ದರು.