ಬೆಂಗಳೂರು: ರೆಮ್ಡಿಸಿವಿರ್ ನೀಡಲು ಖಾಸಗಿ ಆಸ್ಪತ್ರೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಆಸ್ಪತ್ರೆಯ ಬೇಜವಾಬ್ದಾರಿಗೆ ಕೊರೊನಾ ರೋಗಿ ಬಲಿಯಾಗಿದ್ದಾರೆ. ಈ ಸಂಬಂಧ ಬಿಬಿಎಂಪಿ ವೈದ್ಯ ರಾಜೇಂದ್ರ ಎಂಬುವರು ನೀಡಿದ ದೂರಿನ ಮೇರೆಗೆ ವಿಜಯ ನಗರ ಪೊಲೀಸರು ಭಾರತಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ 64 ವರ್ಷದ ವೃದ್ಧೆಯನ್ನು ಕೊರೊನಾ ಹಿನ್ನೆಲೆ ಭಾರತಿ ಆಸ್ಪತ್ರೆಗೆ ಆಕೆಯ ಕುಟುಂಬಸ್ಥರು ದಾಖಲಿಸಿದ್ದರು. ರೆಮ್ಡಿಸಿವಿರ್ ಇಂಜೆಕ್ಷನ್ ನೀಡಲು ಆಸ್ಪತ್ರೆಯವರು 15 ಸಾವಿರಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ಕುಟುಂಬಸ್ಥರು, ಬಿಬಿಎಂಪಿ ಹಾಗೂ ಡ್ರಗ್ಸ್ ಕಂಟ್ರೋಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಆಸ್ಪತ್ರೆ ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ನಂತರ ರೋಗಿಗೆ ರೆಮ್ಡಿಸಿವಿರ್ ಇಂಜಕ್ಷನ್ ನೀಡಿದ್ದಾರೆ.
ಇದೇ ಕೋಪಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯನ್ನು ಆಸ್ಪತ್ರೆಯು ಡಿಸ್ಚಾರ್ಜ್ ಮಾಡಿದೆ. ಅನ್ಯ ಆಸ್ಪತ್ರೆಗಳಲ್ಲಿ ಹುಡುಕಾಡಿದರೂ ಬೆಡ್ ಸಿಗದೆ ಮೃತಪಟ್ಟಿದ್ದಾರೆ. ರೆಮ್ಡಿಸಿವಿರ್ ನೀಡಲು ಹಣದ ಡಿಮ್ಯಾಂಡ್ ಹಾಗೂ ನಿರ್ಲಕ್ಷ್ಯ ಆರೋಪ ಸಂಬಂಧ ಆಸ್ಪತ್ರೆ ವಿರುದ್ಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.