ಬೆಂಗಳೂರು : ಟೆಲಿಗ್ರಾಂನಲ್ಲಿ ಪರಿಚಯವಾದ ಮಹಿಳೆಯ ಆಹ್ವಾನ ನಂಬಿ ಹೋದ ಉದ್ಯಮಿಯೊಬ್ಬರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಕೊನೆಗೆ ಪರಾರಿಯಾಗಿ ಬಂದು ಪೊಲೀಸ್ ಮೊರೆ ಹೋದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 27 ವರ್ಷದ ಉದ್ಯಮಿಯೊಬ್ಬರು ನೀಡಿರುವ ದೂರಿನ ಅನ್ವಯ ಮೆಹರ್ ಹೆಸರಿನ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ: ದೂರುದಾರರಿಗೆ ಟೆಲಿಗ್ರಾಂ ಮೂಲಕ ಆರೋಪಿ ಮಹಿಳೆಯ ಪರಿಚಯವಾಗಿದ್ದು, ನಂತರ ಪರಸ್ಪರ ವಾಟ್ಸ್ಆ್ಯಪ್ ಚಾಟಿಂಗ್ ಹಂತಕ್ಕೂ ತಲುಪಿತ್ತು. 'ತನ್ನ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ತಾನು ಲೈಂಗಿಕ ತೃಪ್ತಿಗಾಗಿ ಸಂಗಾತಿಯ ಹುಡುಕಾಟದಲ್ಲಿದ್ದೇನೆ' ಎಂದಿದ್ದ ಆರೋಪಿ, ಮಾರ್ಚ್ 3ರಂದು ತನ್ನ ಫೋಟೋ ಮತ್ತು ಲೊಕೇಶನ್ ಕಳುಹಿಸಿ ದೂರುದಾರರನ್ನು ಜೆ.ಪಿ. ನಗರದ 5ನೇ ಹಂತದಲ್ಲಿರುವ ಅಮಿನಾಮಂಜಿಲ್ ಹೆಸರಿನ ಕಟ್ಟಡಕ್ಕೆ ಕರೆಸಿಕೊಂಡಿದ್ದಳು.
ಬೆಡ್ ರೂಮಿನಲ್ಲಿ ದೂರುದಾರ ವ್ಯಕ್ತಿ ಕುಳಿತಿದ್ದಾಗ ಏಕಾಏಕಿ ಬಂದ ಮೂವರು ಯುವಕರು 'ಯಾರು ನೀನು? ಯಾಕೆ ಬಂದಿದ್ದೀಯಾ' ಎಂದು ದೂರುದಾರ ವ್ಯಕ್ತಿಯ ಮುಖಕ್ಕೆ ಗುದ್ದಿ ಹಲ್ಲೆ ಮಾಡಿದ್ದಾರೆ. ಬಳಿಕ, 'ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ, ನಿನಗೆ ಮುಂಜಿ ಮಾಡಿಸಿ ಮೆಹರ್ ಜೊತೆ ಮದುವೆ ಮಾಡಿಸುತ್ತೇವೆ ಎಂದಿದ್ದಲ್ಲದೆ, ಮೂರು ಲಕ್ಷ ರೂಪಾಯಿ ಕೊಟ್ಟರೆ ಬಿಟ್ಟು ಕಳಿಸುತ್ತೇವೆ' ಎಂದು ಬೆದರಿಸಿದ್ದಾರೆ. ಬಳಿಕ ದೂರುದಾರನ ಮೊಬೈಲ್ ಫೋನ್ ಪಡೆದು 21,500 ರೂಪಾಯಿ ಫೋನ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ರಾತ್ರಿ 8 ಗಂಟೆವರೆಗೂ ತಮ್ಮ ಜೊತೆಯಲ್ಲೇ ಇರಿಸಿಕೊಂಡ ಬಳಿಕ ಕ್ರೆಡಿಟ್ ಕಾರ್ಡ್ ಇದ್ದರೆ 2.5 ಲಕ್ಷ ವರ್ಗಾಯಿಸುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹನಿಟ್ರ್ಯಾಪ್ಗೆ ನಲುಗಿ, ಹೆಂಡ್ತಿಯ ಒಡವೆ ಮಾರಿ ಹಣ ಕೊಟ್ಟಿದ್ದ ವ್ಯಕ್ತಿ.. ಪೊಲೀಸರ ಸಹಾಯದಿಂದ ನಿಟ್ಟುಸಿರು ಬಿಟ್ಟ ವಿವಾಹಿತ
ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ ಎಂದು ಹೇಳಿದ ದೂರುದಾರ ವ್ಯಕ್ತಿ, ಆರೋಪಿಗಳು ಕ್ರೆಡಿಟ್ ಕಾರ್ಡ್ ತರೋಣವೆಂದು ಕಟ್ಟಡದ ಹೊರಗಡೆ ಕರೆತಂದಾಗ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಳಿಕ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: ತಡರಾತ್ರಿ ಮನೆಗೆ ನುಗ್ಗಿ ಕಳ್ಳತನ: ಓಲೆ ಕೀಳುವಾಗ ಮಹಿಳೆಯ ಕಿವಿ ಹರಿದು ಗಾಯ!