ಬೆಂಗಳೂರು: ಪೊಲೀಸ್ ಠಾಣೆಯಿಂದಲೇ ಹೈ ಪ್ರೊಫೈಲ್ ಪ್ರಕರಣಕ್ಕೆ ಸಂಬಂಧಿಸಿದ ಕಡತ ಕಾಣೆಯಾದ ಪ್ರಸಂಗ ನಡೆದಿದ್ದು, ಠಾಣಾ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದಾರೆ.
ಕೇಂದ್ರ ವಲಯ ಡಿಸಿಪಿ ಕಚೇರಿಗೆ ಹೊಂದಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆಯಿಂದಲೇ ಪ್ರತಿಷ್ಠಿತ ಮಣಿಪಾಲ್ ಕಂಪನಿಗೆ ವಂಚಿಸಿದ್ದ ಪ್ರಕರಣದ ತನಿಖೆ ನಡೆಸಿದ ಬಳಿಕ ಸಂಗ್ರಹಿಸಿದ್ದ ಮೂಲ ದಾಖಲೆಗಳಿದ್ದ ಫೈಲ್ ಮಿಸ್ ಆಗಿದೆ ಎಂದು ದೂರು ದಾಖಲಾಗಿದೆ. ಖದ್ದು ಠಾಣಾ ಇನ್ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ಈ ರೀತಿ ದೂರು ದಾಖಲಿಸಿದ್ದು, ಪ್ರಕರಣದ ತನಿಖೆಯಲ್ಲಿ ತಮಗೆ ಸಹಾಯಕರಾಗಿದ್ದ ಪೇದೆ ಕಿರಣ್ ಕುಮಾರ್ ವಿ.ಎಸ್ ವಿರುದ್ಧ ಆರೋಪ ಮಾಡಿದ್ದಾರೆ. ಫೈಲ್ ಮಿಸ್ ಆಗಿರುವ ಬಗ್ಗೆ ಕಿರಣ್ ಕುಮಾರ್ ಸರಿಯಾಗಿ ಸ್ಪಷ್ಟನೆ ಕೂಡಾ ನೀಡದಿರುವುದರಿಂದ ಠಾಣೆಯಲ್ಲಿ ಹುಡುಕಿದ ಬಳಿಕ ದೂರು ನೀಡಿದ್ದಾಗಿ ಉಲ್ಲೇಖಿಸಿದ್ದಾರೆ.
ಈಗಾಗಲೇ ವಂಚನೆ ಪ್ರಕರಣದ ಮೂವರು ಆರೋಪಿಗಳು ಪೊಲೀಸ್ ವಶದಲ್ಲಿದ್ದು, ಮತ್ತೋರ್ವ ಆರೋಪಿ ವಿಶಾಲ್ ಸೋಮಣ್ಣ ಕತಾರ್ ದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ವಿಚಾರಣೆ ಚಾರ್ಜ್ ಶೀಟ್ ಹಂತಕ್ಕೆ ಬಂದಿರುವಾಗ ಆರೋಪಿಗಳಿಗೆ ಜಾಮೀನು ಸಿಗಬಹುದು ಎಂಬ ದುರುದ್ದೇಶದಿಂದ ಮಹತ್ವದ ದಾಖಲೆಗಳ ಕಡತ ಕಳ್ಳತನ ಮಾಡಲಾಗಿದೆ. ಆದರೂ ಸಹ ಅದಕ್ಕೆ ಪೂರಕ ಸಾಕ್ಷಿ ಮತ್ತು ದಾಖಲಾತಿಗಳನ್ನ ನ್ಯಾಯಾಲಯಕ್ಕೆ ಒದಗಿಸಿರುವ ಇನ್ಸ್ಪೆಕ್ಟರ್ ಚಾರ್ಚ್ ಶೀಟ್ ಫೈಲ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಣಿಪಾಲ್ ಎಜುಕೇಶನ್ & ಮೆಡಿಕಲ್ ಗ್ರೂಪ್ನ ನಿರ್ದೇಶಕರಾದ ರಂಜನ್ ಪೈ ಹಾಗೂ ಶ್ರುತಿ ಪೈ ಖಾತೆಯಿಂದ ಮ್ಯಾನೇಜರ್ ಆಗಿದ್ದ ಸಂದೀಪ್ ಗುರುರಾಜ್ 62 ಕೋಟಿ ವಂಚಿಸಿದ್ದಾರೆ ಎಂದು ಕಳೆದ ಡಿ.26 ರಂದು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ್ದ ಪೋಲಿಸರು ಮ್ಯಾನೇಜರ್ ಸಂದೀಪ್ ಗುರುರಾಜ್, ಅವರ ಪತ್ನಿ ಚಾರುಸ್ಮಿತಾ, ಸ್ನೇಹಿತರಾದ ಮೀರಾ ಚಂಗಪ್ಪ ಹಾಗೂ ಅಮೃತಾ ಚಂಗಪ್ಪರನ್ನ ಬಂಧಿಸಿದ್ದರು. ಆದರೆ ಮತ್ತೋರ್ವ ಆರೋಪಿ ಕತಾರ್ ಏರ್ ವೇಸ್ ಉದ್ಯೋಗಿ ವಿಶಾಲ್ ಸೋಮಣ್ಣ ತಲೆಮರೆಸಿಕೊಂಡಿದ್ದ. ಪ್ರಕರಣದ ತನಿಖೆಯನ್ನು ಕಬ್ಬನ್ ಪಾರ್ಕ್ ಪೊಲೀಸರು ನಡೆಸುತ್ತಿದ್ದರು.