ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯ ಅಗಲೀಕರಣ ಕಾಮಗಾರಿ ಶುರುವಾಗಿದೆ. ಈ ಕಾಮಗಾರಿಯನ್ನು ಬೆಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ. ಈ ರಸ್ತೆ ಅಗಲೀಕರಣ ಮಾಡುವಂತೆ ಸುಪ್ರೀಂಕೋರ್ಟ್ ಕೋರ್ಟ್ ನಿರ್ದೇಶನವಿದೆ. ಆದರೂ ಬಿಬಿಎಂಪಿ ಕಾಮಗಾರಿ ನಡೆಸಲು ಸಾಕಷ್ಟು ವಿಳಂಬ ಮಾಡುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಈಗಾಗಲೇ ಕಾಮಗಾರಿ ಪ್ರಾರಂಭವಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ವಿವರಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಬಿಬಿಎಂಪಿ ಹಿರಿಯ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಮುಂದಿನ ನಾಲ್ಕು ವಾರಗಳಲ್ಲಿ ಕಾಮಗಾರಿಯ ಪ್ರಗತಿಯ ವರದಿಯನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಈ ಹಿಂದೆ ನಡೆದ ವಿಚಾರಣೆ ಏನು? : ಕಳೆದ ಬಾರಿ ನಡೆಸಿದ್ದ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ಭಾಗದ ರಸ್ತೆ ಮತ್ತು ಮೂಲಭೂತ ಸೌಲಭ್ಯಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಎಸ್. ಪ್ರಿಯದರ್ಶಿನಿ ಅವರ ಪರವಾಗಿ ಪ್ರಮಾಣ ಪತ್ರ ಸಲ್ಲಿಸಿತ್ತು. ಬಳಿಕ ಬಳ್ಳಾರಿ ರಸ್ತೆ ಅಗಲೀಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಸೂಚನೆಯಂತೆ ಮೇಖ್ರಿ ವೃತ್ತದಿಂದ ಕಾವೇರಿ ಚಿತ್ರಮಂದಿರದವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಪ್ರಗತಿಯಲ್ಲಿದೆ.
ಸುಮಾರು 1260 ಮೀಟರ್ ಉದ್ದವಿರುವ ಈ ಮಾರ್ಗ ಮೇಖ್ರಿ ವೃತ್ತದಿಂದ ಆರು ಪಥಗಳ ರಸ್ತೆಯಿದ್ದು, ಗಾಯಿತ್ರಿ ವಿಹಾರ್ ಬಳಿ ಸಣ್ಣದಾಗಿ ಕೇವಲ ಎರಡು ಪಥಗಳಾಗಿವೆ. ಅರಮನೆ ಮೈದಾನದ ದ್ವಾರದ ಸಂಖ್ಯೆ ನಾಲ್ಕರಿಂದ ಕಾವೇರಿ ಚಿತ್ರಮಂದಿರದವರೆಗೂ ಕೇವಲ ಎರಡು ಪಥಗಳಾಗಿದೆ. ಈ ಭಾಗದ ಉದ್ದ 630 ಮೀಟರ್‌ಗಳಾಗಿದ್ದು, ಅಗಲ 3 ರಿಂದ 3.5 ಮೀಟರ್‌ನಷ್ಟಿದೆ. ಇದೀಗ ರಸ್ತೆ ಅಗಲೀಕರಣ ಮಾಡುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಅಗಲ 7.5 ರಿಂದ 9.5ಕ್ಕೆ ಹೆಚ್ಚಳವಾಗಲಿದೆ. ಇದರಿಂದಾಗಿ ಈವರೆಗೂ ಎರಡೂ ಮಾರ್ಗಗಳಲ್ಲಿ ಕೇವಲ ಎರಡು ಪಥಗಳಿರುವ ರಸ್ತೆ ಮೂರು ಪಥಗಳಾಗಿ ಬದಲಾಗಲಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದರು.
2 ಮರಗಳು ಸ್ಥಳಾಂತರ, 53 ಮರಗಳ ತೆರವು : ಅಲ್ಲದೇ, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವು ಮಾಡುವುದು ಮತ್ತು ಸ್ಥಳಾಂತರ ಮಾಡುವುದಕ್ಕೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಅರ್ಜಿ ಕಳುಹಿಸಲಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿಗಳು 2012ರ ಡಿಸೆಂಬರ್ 12ರಂದು ಮರಗಳ ತೆರವು ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡಿದ್ದಾರೆ. ಹೀಗಾಗಿ ಎರಡು ಮರಗಳನ್ನು ಸ್ಥಳಾಂತರ ಮಾಡಿದ್ದು, ಇನ್ನುಳಿದ 53 ಮರಗಳನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಜೊತೆಗೆ ಮೇಖ್ರಿ ವೃತ್ತದಿಂದ ಜಯಮಹಲ್ ಮಾರ್ಗದ ರಸ್ತೆಯ ಅಗಲೀಕರಣಕ್ಕೆ ಕಾಮಗಾರಿ ಪ್ರಾರಂಭವಾಗಬೇಕಿದ್ದು, ಈ ಸಂಬಂಧ ಮತ್ತೊಂದು ಪ್ರಮಾಣಪತ್ರ ಸಲ್ಲಿಸಲಾಗುವುದು. ಹಾಗೂ ಹೈಕೋರ್ಟ್ ನೀಡುವ ಎಲ್ಲ ಆದೇಶಗಳನ್ನು ಬಿಬಿಎಂಪಿ ತಪ್ಪದೇ ಪಾಲಿಸಲಿದೆ ಎಂದು ಬಿಬಿಎಂಪಿ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ವಿವರಿಸಿತ್ತು.
ಅಲ್ಲದೇ, ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಸೆ.16ರಂದು ನಡೆದ ಮುಖ್ಯಮಂತ್ರಿ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಬಳ್ಳಾರಿ ರಸ್ತೆಯಲ್ಲಿ ಕಾವೇರಿ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಲಭ್ಯವಿರುವ ಭೂಮಿಯನ್ನೇ ಬಳಸಿಕೊಂಡು ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಅಂದರೆ ಮೇಖ್ರಿ ವೃತ್ತದಿಂದ ಗಾಯತ್ರಿ ವಿಹಾರ (ಅರಮನೆ ಮೈದಾನ ಗೇಟ್-4) ವರೆಗೆ 6 ಲೈನ್ ರಸ್ತೆಯಿದೆ. ಗಾಯತ್ರಿ ವಿಹಾರದಿಂದ ಕಾವೇರಿ ಚಿತ್ರಮಂದಿರದವರೆಗೂ ಮೂರು ಲೈನ್ನಿಂದ ಎರಡು ಲೈನ್ ವರಗೆ ರಸ್ತೆಯಾಗಲಿದೆ. ಅರಮನೆ ರಸ್ತೆಯ ನಾಲ್ಕನೇ ದ್ವಾರದಿಂದ ಕಾವೇರಿ ಚಿತ್ರಮಂದಿರದವರೆಗೆ ಎರಡು ಲೈನ್ ರಸ್ತೆಯನ್ನು, ಮೂರು ಲೈನ್ ರಸ್ತೆಯಾಗಿ ಅಗಲೀಕರಣ ಮಾಡಬೇಕಿದೆ ಎಂದು ಹೈಕೋರ್ಟ್ ತಿಳಿಸಿತ್ತು.
ಇದನ್ನೂ ಓದಿ :ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಪ್ರವರ್ಗ ನಿರ್ಧರಿಸುವ ಹಕ್ಕು ನ್ಯಾಯಮಂಡಳಿಗಿದೆ: ಹೈಕೋರ್ಟ್