ಬೆಂಗಳೂರು: ದೇಶದ ರಾಜಧಾನಿ ದೆಹಲಿಯಲ್ಲಿ ಕಾರುಗಳನ್ನು ಕದ್ದು ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೈಕಿ ಓರ್ವ ಆರೋಪಿಯನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಖದೀಮರ ಗ್ಯಾಂಗ್ನಲ್ಲಿ ಗುರುತಿಸಿಕೊಂಡಿದ್ದ ಚಂದ್ರಾಲೇಔಟ್ ನಿವಾಸಿ ತನ್ವೀರ್ ಎಂಬಾತನನ್ನು ಬಂಧಿಸಿ ದುಬಾರಿ ಬೆಲೆಯ ಐದು ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ದೆಹಲಿ ಮೂಲದ ಖದೀಮರು ರಾಷ್ಟ್ರ ರಾಜಧಾನಿಯಲ್ಲಿ ದುಬಾರಿ ಬೆಲೆಯ ಕಾರುಗಳನ್ನು ಕಳ್ಳತನ ಮಾಡುತ್ತಿದ್ದರು. ಬಳಿಕ ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ ನಕಲಿ ನಂಬರ್ ಅಳವಡಿಸುತ್ತಿದ್ದರು. ಜೊತೆಗೆ ನಕಲಿ ದಾಖಲಾತಿ ಸೃಷ್ಟಿಸಿ ಕಾರುಗಳನ್ನು ಬಂಧಿತ ಆರೋಪಿ ತನ್ವೀರ್ ನಗರದಲ್ಲಿ ಕಾರು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಕೊಡಿಗೆಹಳ್ಳಿಯಲ್ಲಿ ಕದ್ದ ಕಾರು ಮಾರಾಟ ಮಾಡುತ್ತಿರುವ ಮಾಹಿತಿ ಅರಿತು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಕಿರುಕುಳ: ಆರೋಪಿ ಅಂದರ್