ಬೆಂಗಳೂರು: ಶ್ರೀಮಂತ ಮಕ್ಕಳ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ತಾಜ್ ವೆಸ್ಟ್ಎಂಡ್ ಹೋಟೆಲ್ನಲ್ಲಿ ಹೋಲಿ ಹಬ್ಬ ಆಚರಣೆ ಮಾಡಿದ ನಂತರ, ಹೊರಗೆ ಹೋಗುವ ಸಂದರ್ಭದಲ್ಲಿ ಕಾರುಗಳು ಡಿಕ್ಕಿಯಾಗಿದ್ದವು. ಬಳಿಕ ಪರಸ್ಪರ ಗಲಾಟೆ ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಗಳನ್ನ ಹೈಗ್ರೌಂಡ್ ಸಂಚಾರ ಪೊಲೀಸರು ಬಂಧಿಸಿದ್ದಾರೆ.
ತಾಜ್ ವೆಸ್ಟ್ ಹೋಟೆಲ್ನಲ್ಲಿ ಹೋಲಿ ಹಬ್ಬ ಆಚರಣೆಗಾಗಿ ನಿನ್ನೆ ಗಣ್ಯ ವ್ಯಕ್ತಿಗಳ ಮಕ್ಕಳು ,ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದ್ದರು. ಹೋಲಿ ಸಂಭ್ರಮ ಮುಗಿದ ನಂತರ ಹೊರ ಬರುವ ವೇಳೆ ಮಹೀಂದ್ರ ಎಕ್ಸ್ ಯು ವಿ, ಪೋಲೊ ಜಿಟಿಎಸ್ ಒಂದಕ್ಕೊಂದು ಡಿಕ್ಕಿಯಾಗಿ ಗಲಾಟೆ ಶುರುವಾಗಿತ್ತು. ಹೈಗ್ರೌಂಡ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದರು.
ಪೋಲೊ ಕಾರಿನ ಚಾಲಕ ಆಕಾಶ್ ಕೆ. ಮೂರ್ತಿ, ರಾಹುಲ್ ರೆಡ್ಡಿ ಅವರ ಮಹೀಂದ್ರ ಎಕ್ಸ್ ಯು ವಿ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ತಕ್ಷಣ ಇಬ್ಬರ ನಡುವೆ ಜಗಳ ತಾರಕಕ್ಕೇರಿದ ಪರಿಣಾಮ, ಸ್ಥಳದಲ್ಲಿ ಇತರೆ ವಾಹನ ಸವಾರರಿಗೂ ತೊಂದರೆಯಾಯಿತು. ಪೊಲೀಸರು ಪರಿಶೀಲನೆ ನಡೆಸಿದಾಗ ಕುಡಿದು ಅಜಾಗರುಕತೆಯಿಂದ ಗಾಡಿ ಓಡಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಮಕ್ಕಳ ಕುಟುಂಬದವಾರಾಗಿದ್ದು, ಮೋಜು ಮಸ್ತಿಗಾಗಿ ಹೋಲಿ ಸಂಭ್ರಮದಲ್ಲಿ ಕುಡಿದು ಈ ರೀತಿ ಮಾಡಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.