ಬೆಂಗಳೂರು : ಕುಡಿದ ನಶೆಯಲ್ಲಿ ಸ್ನೇಹಿತನೊಂದಿಗೆ ಸೇರಿ ಸಿಎಂ ಪುತ್ರ ವಿಜಯೇಂದ್ರ ವಾಸ ಮಾಡುವ ಅಪಾರ್ಟ್ಮೆಂಟ್ನ ಉದ್ಯಮಿಗೆ ಸೇರಿದ ಕಾರಿನಲ್ಲಿ ಜಾಲಿರೈಡ್ ಮಾಡಿ ಅಪಘಾತವೆಸಗಿ ಏನು ಆಗೇ ಇಲ್ಲವೆಂಬಂತೆ ಬಿಂಬಿಸಿಕೊಂಡಿದ್ದ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರನ್ನು ಹೈಗ್ರೌಂಡ್ ಪೊಲೀಸರು ಬಂಧಿಸಿದ್ದಾರೆ.
ಕಾರು ಮಾಲೀಕ ಬಿ ವಿ ರವಿಕುಮಾರ್ ಪರವಾಗಿ ರಾಘವನ್ ಎಂಬುವರು ನೀಡಿದ ದೂರಿನ ಮೇರೆಗೆ ತ್ರಿಪುರ ಮೂಲದ ಸೆಕ್ಯೂರಿಟಿ ಗಾರ್ಡ್‌ಗಳಾದ ಪ್ರಿಯಾಂಕ್ ಹಾಗೂ ಶುಭಂ ಎಂಬುವರನ್ನು ಜೈಲಿಗಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಾಧವ ನಗರದಲ್ಲಿರುವ ಆದರ್ಶ್ ರೋಸ್ ಅಪಾರ್ಟ್‌ಮೆಂಟ್‌ನಲ್ಲಿ ರವಿಕುಮಾರ್ ವಾಸವಾಗಿದ್ದಾರೆ. ಅಲ್ಲದೇ ಕಟ್ಟಡದಲ್ಲೇ ಸಿಎಂ ಪುತ್ರ ವಿಜಯೇಂದ್ರ ಕೂಡ ವಾಸವಾಗಿದ್ದಾರೆ. ಹೀಗಾಗಿ, ವಸತಿ ಸಮುಚ್ಚಯಕ್ಕೆ ಕಳೆದ ಒಂದು ವರ್ಷದಿಂದ ಸೆಕ್ಯೂರಿಟಿಯಾಗಿ ಈತ ಕೆಲಸ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಶುಭಂ ಮಂತ್ರಿ ಮಾಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ.
ಶುಭಂ ತಂದ ಆಪತ್ತು : ಒಂದೇ ರಾಜ್ಯದವರಾಗಿದ್ದರಿಂದ ಇಬ್ಬರು ಸ್ನೇಹಿತರಾಗಿದ್ದರು. ಇದೇ ಸಲುಗೆ ಮೇರೆಗೆ ಫೆ.13ರಂದು ಸ್ನೇಹಿತ ಶುಭಂನನ್ನು ಅಪಾರ್ಟ್‌ಮೆಂಟ್ ಬಳಿ ಕರೆಯಿಸಿಕೊಂಡು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಲೋಕಾಭಿರಾಮವಾಗಿ ಮಾತಿಗೆ ಕುಳಿತಿದ್ದ ಶುಭಂ, ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಹೊಂಡಾ ಸಿಟಿ ಕಾರ್ ಕಂಡು ಜಾಲಿ ರೈಡ್ ಮಾಡೋಣ ಎಂದು ಪ್ರಿಯಾಂಕ್‌ಗೆ ಹೇಳಿದ್ದಾನೆ.
ವೆಹಿಕಲ್ ಲಾಕರ್‌ನಲ್ಲಿ ಮಾಲೀಕರು ನೇತಾಕಿದ್ದ ಕಾರ್ ಕೀ ಸಹ ಗಮನಿಸಿದ್ದಾನೆ. ರಾತ್ರಿ ವೇಳೆ ಜಾಲಿ ರೈಡ್ ಮಾಡಿಕೊಂಡು ಮತ್ತೆ ಗಾಡಿ ಇಲ್ಲಿಯೇ ತಂದು ನಿಲ್ಲಿಸೋಣ ಎಂದು ಮಾತನಾಡಿಕೊಂಡು ಕಾರ್ ಹತ್ತಿದ್ದಾರೆ. ನಗರದೆಲ್ಲೆಡೆ ಜಾಲಿ ರೈಡ್ ಮಾಡಿ ಚಾಮರಾಜಪೇಟೆ ಕಡೆ ಬರುವಾಗ ಕಾರು ಅಪಘಾತ ಮಾಡಿಕೊಂಡಿದ್ದಾರೆ.
ಆತಂಕ್ಕೊಳಕಾದ ಇಬ್ಬರೂ ಕಾರಿನಿಂದ ಕೆಳಗಿಳಿದು ಕಾರಿನ ಫೋಟೊವನ್ನು ತನ್ನ ಮೊಬೈಲ್‌ನಲ್ಲಿ ಕ್ಲಿಕಿಸಿಕೊಂಡು ಆಟೋ ಹತ್ತಿ ಅಪಾರ್ಟ್ಮೆಂಟ್ಗೆ ಬಂದು ಕಾರಿನ ಕೀ ಲಾಕರ್‌ನಲ್ಲಿ ನೇತಾಕಿ ಸುಮ್ಮನಾಗಿದ್ದಾರೆ.
ಮಾಲೀಕರಿಗೆ ಆತಂಕ : ಮಾರನೇ ದಿನ ಎಂದಿನಂತೆ ಪಾರ್ಕಿಂಗ್ ಲಾಟ್‌ನಲ್ಲಿ ಬಂದು ನೋಡಿದ ಮಾಲೀಕರಿಗೆ ಆತಂಕದ ಜೊತೆಗೆ ಅಚ್ಚರಿ ಕಾದಿತ್ತು. ನಾಪತ್ತೆಯಾಗಿರುವ ಕಾರು ಒಂದೆಡೆಯಾದರೆ ಕಾರಿನ ಕೀ ಲಾಕರ್‌ನಲ್ಲಿ ಇರುವುದನ್ನೂ ಗಮನಿಸಿದ್ದರು.
ಈ ಬಗ್ಗೆ ಪ್ರಿಯಾಂಕ್‌ನನ್ನು ಪ್ರಶ್ನಿಸಿದಾಗ, ತನಗೇನೂ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದ. ಈ ಸಂಬಂಧ ಸೆಕ್ಯೂರಿಟಿ ಗಾರ್ಡ್ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಸೆಕ್ಯೂರಿಟಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಜಾಲಿರೈಡ್ ಕಥೆ ಬಿಚ್ಚಿಟ್ಟಿದ್ದಾನೆ.
ಮಿಸ್ಡ್ ಕಾಲ್ ಕೊಡ್ತು ಕಾರ್ ನ ಸುಳಿವು : ಮೊಬೈಲ್ ಟವರ್ ಪರಿಶೀಲನೆ ವೇಳೆ ರಾಜಾಜಿನಗರ, ಬಸವೇಶ್ವರನಗರ, ಕೆಂಗೇರಿ, ಆರ್‌ಆರ್‌ನಗರ ಹಾಗೂ ಚಾಮರಾಜಪೇಟೆಯಲ್ಲಿ ಕಾರಿನಲ್ಲಿ ಸುತ್ತಾಡಿರುವುದು ಪೊಲೀಸರು ಕಂಡು ಕೊಂಡಿದ್ದರು.
ಅಘಘಾತದ ವೇಳೆ ಆರೋಪಿ ಮೊಬೈಲ್ಗೆ ಮಿಸ್ಡ್ ಕಾಲ್ ಬಂದಿತ್ತು. ಇದರ ಆಧಾರದ ಮೇಲೆ ಪರಿಶೀಲಿಸಿದಾಗ ಚಾಮರಾಜಪೇಟೆಯ 5ನೇ ಕ್ರಾಸ್ ಬಳಿ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಾರು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಸ್ಥಳೀಯ ಸಂಚಾರಿ ಪೊಲೀಸರಿಗೆ ಅಪಘಾತವಾಗಿ ಕಾರು ನಿಲ್ಲಿಸಿರುವ ಬಗ್ಗೆ ಮಾಹಿತಿಯೂ ಇರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಂ ಪುತ್ರನಿಂದ ಬೆನ್ನು ತಟ್ಟಿಸಿಕೊಂಡಿದ್ದ : ಒಂದು ವರ್ಷದಿಂದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಂಕ್ ಒಳ್ಳೆಯ ಕೆಲಸಗಾರನಾಗಿದ್ದ. ಈತನ ಕೆಲಸವನ್ನು ಕಂಡು ವಿಜಯೇಂದ್ರ ಅವರು ಬೆನ್ನು ತಟ್ಟಿದ್ದರು. ರಾತ್ರಿ ಪಾಳಿಯಲ್ಲಿ ಕಾವಲು ಕಾಯುವಂತೆ ಹೇಳಿದ್ದರು. ಅಪಾರ್ಟ್‌ಮೆಂಟ್ ನಿವಾಸಿಗಳು ಈತನ ಕೆಲಸ ಮೆಚ್ಚಿದ್ದರು. ಆದರೆ, ಈತನ ಸ್ನೇಹಿತ ಮಾಡಿದ ಯಡವಟ್ಟು ಈತನ ಬದುಕನ್ನು ಈಗ ಕಂಬಿ ಹಿಂದೆ ದೂಡುವಂತೆ ಮಾಡಿದೆ.