ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್.ಕಾಂತರಾಜ್ ಹಾಗೂ ಸದಸ್ಯರ ನೇಮಕ ರದ್ದುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಹಿರಿಯ ವಕೀಲರಾದ ಕಾಂತರಾಜ್ ಅವರನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲಿಯೂ ಇವರನ್ನು ಮುಂದುವರಿಸಲಾಗಿತ್ತು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಜತೆಗೆ ಸದಸ್ಯರಾದ ಕೆ.ಎನ್.ಲಿಂಗಪ್ಪ, ಎನ್.ಪಿ.ಧರ್ಮರಾಜ್, ಶರಣಪ್ಪ ಡಿ. ಮಣಿಗಾರ ಮತ್ತು ಡಿ.ಜಿ.ಗೋಪಾಲ ಅವರ ನೇಮಕ ಸಹ ರದ್ದುಪಡಿಸಲಾಗಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 2014ರ ಜೂನ್ 26ರಂದು ಕಾಂತರಾಜ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದರು. 2017 ಜುಲೈ ತಿಂಗಳು ಅವಧಿ ಮುಗಿದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಪೂರ್ಣಗೊಂಡಿದ್ದರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲೂ ಕಾಂತರಾಜ್ ಅವರನ್ನು ಮುಂದುವರಿಸಲಾಗಿತ್ತು.