ಬೆಂಗಳೂರು : ಟೋಲ್‍ಗಳಲ್ಲಿ ಸಮಸ್ಯೆ ಇರುವುದು ನಿಜ. ಸುಧಾರಣೆ ತರಲು ಸಾಕಷ್ಟು ಕ್ರಮಕೈಗೊಳ್ಳಲಾಗಿದೆ. ಟೋಲ್ ಏಜೆನ್ಸಿಗಳ ಜೊತೆ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಟೋಲ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ, ಅವುಗಳ ರದ್ಧತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
2022-23ನೇ ಸಾಲಿನ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಸಚಿವರು ಉತ್ತರಿಸಿದರು. ಕೇಂದ್ರ ಸರ್ಕಾರದ ಟೋಲ್ ಆಗಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು. ರಾಜ್ಯ ಸರ್ಕಾರದ ಟೋಲ್ ಆಗಿದ್ದರೆ, ರಾಜ್ಯ ಸರ್ಕಾರವೇ ಕ್ರಮಕೈಗೊಳ್ಳಲಿದೆ ಎಂದರು.
ರೈಲ್ವೆ ಕೆಳಸೇತುವೆ ಮೇಲ್ಸೇತುವೆ ಮಾಡಿಕೊಡುವ ಭರವಸೆ ನೀಡಿದ ಸಚಿವರು, ವಿಳಂಬವಾಗಿರುವ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಟೋಲ್ ಕೇಂದ್ರಗಳಲ್ಲಿ ಟೋಲ್ ಸಂಗ್ರಹಕ್ಕೆ ಕ್ರಿಮಿನಲ್ ಹಿನ್ನೆಲೆ ಬಳಕೆ ವಿಚಾರ ಸದನದಲ್ಲಿ ಪ್ರಸ್ತಾಪವಾಯಿತು. ಇದನ್ನು ಸಚಿವರು ಒಪ್ಪಿಕೊಂಡರು. ಅಲ್ಲದೇ ಸುಧಾರಣೆ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಸಭೆ ನಡೆಸಿ ಸೂಕ್ತ ನಿರ್ಧಾರ : ಬೆಂಗಳೂರಿನ ಕೆ.ಆರ್. ಪುರದ ಟಿನ್ ಫ್ಯಾಕ್ಟರಿ ಜಂಕ್ಷನ್‍ನಿಂದ ಹೊಸಕೋಟೆಯ ಕಾಟಂನಲ್ಲೂರು ಗೇಟ್ವರೆಗೆ ಮೇಲ್ಸೇತುವೆ ಎತ್ತರಿಸುವ ಸಂಬಂಧ 2-3 ದಿನಗಳಲ್ಲಿ ಸಚಿವರು, ಶಾಸಕರು, ಅಧಿಕಾರಿಗಳನ್ನೊಳಗೊಂಡ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜು, ಕೃಷ್ಣಭೈರೇಗೌಡ ಅವರನ್ನು ಒಳಗೊಂಡಂತೆ ಸಭೆ ನಡೆಸಲಾಗುವುದು. ಅಗತ್ಯಬಿದ್ದರೆ ಮುಖ್ಯಮಂತ್ರಿಯೊಂದಿಗೆ ಕೇಂದ್ರ ಸಚಿವರನ್ನ ಭೇಟಿ ಮಾಡಲಾಗುವುದು ಎಂದರು.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಆರೋಪ.. ಮಾಜಿ ಸಿಎಂ ಬಿಎಸ್ವೈ ವಿರುದ್ಧ ಎಸಿಬಿಗೆ ದೂರು
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಕೃಷ್ಣಭೈರೇಗೌಡ, ಹಳೆ ಮದ್ರಾಸ್ ರಸ್ತೆಯಲ್ಲಿ ಮೇಲ್ಸೇತುವೆ ಇಲ್ಲ. ಟಿನ್ ಫ್ಯಾಕ್ಟರಿ ಬಳಿಯಿಂದ ಎಲಿವೆಟೆಡ್ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಭೈರತಿ ಬಸವರಾಜ್, ಇಂದಿರಾ ನಗರದ ಬಿಡಿಎ ಕಾಂಪ್ಲೆಕ್ಸ್ ಬಳಿಯಿಂದಲೇ ನಿರ್ಮಾಣ ಮಾಡಬೇಕಾಗುತ್ತದೆ. ಮಧ್ಯಪ್ರವೇಶಿಸಿದ ಜೆಡಿಎಸ್ ಬಂಡೆಪ್ಪ ಕಾಶೆಂಪುರ್, ಇಂದು ಕೆಂಪೇಗೌಡ ಏರ್ಪೊರ್ಟ್‌ನಿಂದ ವಿಧಾನಸೌಧಕ್ಕೆ ಬರಲು 1 ಗಂಟೆ 45 ನಿಮಿಷ ಆಯ್ತು. ಸಂಚಾರ ದಟ್ಟಣೆ ಹೆಚ್ಚಾಗಿದೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಿ ಎಂದು ಹೇಳಿದರು.