ಬೆಂಗಳೂರು: ಮಕ್ಕಳು ಪಡೆಯುವ ಅಂಕಗಳ ಆಧಾರದಲ್ಲಿ ಅವರ ಬುದ್ದಿವಂತಿಕೆ ಅಳೆಯುವುದಕ್ಕೆ ಸಾಧ್ಯವೇ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. 2022ರ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವ (ಬೋರ್ಡ್ ಪರೀಕ್ಷೆ) ಸಂಬಂಧ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ, ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘ(ಓಯುಆರ್‌ಎಸ್) ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರುರ ಅವರಿದ್ದ ನ್ಯಾಯಪೀಠ ಸರ್ಕಾರವನ್ನು ಪ್ರಶ್ನೆ ಮಾಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೊರೊನಾ ಸಂದರ್ಭದಲ್ಲಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಇದನ್ನು ಹೆಚ್ಚಳ ಮಾಡುವುದಕ್ಕಾಗಿ 5 ಮತ್ತ 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರಿಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಅವರನ್ನು ಅದೇ ತರಗತಿಯಲ್ಲಿ ಮುಂದುವರೆಸುವುದಿಲ್ಲ. ಮಕ್ಕಳನ್ನು ಬುದ್ದಿವಂತಿಕೆ ನೋಡುವುದಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಕ್ಕಳು ಪಡೆದ ಅಂಕಗಳ ಆಧಾರದಲ್ಲಿ ಬುದ್ದಿವಂತಿಕೆ ಪರೀಕ್ಷೆ ನಡೆಸಲಾಗುತ್ತಿದಿಯೇ ಎಂದು ಪ್ರಶ್ನಿಸಿತು. ಜತೆಗೆ, ಮಕ್ಕಳ ಸಾಮರ್ಥ್ಯ, ವಿಶ್ವಾಸ ಮತ್ತು ಬುದ್ದಿವಂತಿಕೆಯನ್ನು ಅವರ ಅಂಕಗಳ ಮೇಲೆ ಅಳೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಜತೆಗೆ, ಕೆಲವು ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಶೇ.90ಕ್ಕೂ ಹೆಚ್ಚು ಅಂಕಗಳು ತೆಗೆದುಕೊಳ್ಳದಿದ್ದಲ್ಲಿ ಬೇರೊಂದು ಶಾಲೆಗಳಿಗೆ ಕಳುಹಿಸಲಾಗುತ್ತಿದೆ ಎಂಬ ಅಂಶ ನಮ್ಮ ಗಮನಕ್ಕೆ ಬಂದಿದೆ. ಮಕ್ಕಳ ಬುದ್ದಿವಂತಿಯನ್ನು ಅಳೆಯಲು ಈ ವಿಧಾನ ಸರಿಯಿಲ್ಲ ಎಂದು ತಿಳಿಸಿತು.
ನಮ್ಮ ಮಕ್ಕಳನ್ನು ಅಂಕಗಳ ಆಧಾರದಲ್ಲಿ ಬುದ್ದಿವಂತಿಕೆ ಅಳೆಯುವುದಾದದರೆ ಅತ್ಯುತ್ತಮ ರ‍್ಯಾಂಕ್ ಪಡೆದ ಹಲವು ವಕೀಲರು ತಮ್ಮಲ್ಲಿ ಪ್ರಕರಣಗಳಿಲ್ಲದೇ ಕೋರ್ಟ್ ಕಾರಿಡಾರ್‌ನಲ್ಲಿ ಓಡಾಡುತ್ತಿದ್ದಾರೆ. ಚಿನ್ನದ ಪದಕ ಪಡೆದ ಹಲವು ವೈದ್ಯರ ಬಳಿ ರೋಗಿಗಳೇ ಇಲ್ಲವಾಗಿದೆ. ಗೋಲ್ಡ್ ಮೆಡಲ್ ಪಡೆದ ಎಂಜಿನಿಯರ್‌ಗಳು ನಿರ್ಮಿಸುವ ಕಟ್ಟಡಗಳು ಕುಸಿಯುತ್ತಿವೆ ಎಂದು ವಿವರಿಸಿದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಹೇಳಲಾಗಿದೆ. ಆದರೆ, ಸರ್ಕಾರ ಏಕಾಏಕಿ 5 ಮತ್ತು 8ನೇ ತರಗತಿಗಳ ಮಕ್ಕಳಿಗೆ ಬೋರ್ಡ್ ಮಟ್ಟದ ಪರೀಕ್ಷೆಯನ್ನು ಜಾರಿ ಮಾಡಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆ ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದರು. ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: 2022-23ನೇ ಶೈಕ್ಷಣಿ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ (ಬೋರ್ಡ್ ಪರೀಕ್ಷೆ) 2022ರ ಡಿಸೆಂಬರ್ 12 ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಓದಿ: ಸ್ಮಶಾನ ಭೂಮಿ ಒದಗಿಸಿರುವ ಸಂಬಂಧ ಸುಳ್ಳು ಮಾಹಿತಿ ನೀಡಿದ ಡಿಸಿ: ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ