ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಸಂಭವಿಸಲಿರುವ ಬದಲಾವಣೆಗಳ ಬಗ್ಗೆ ಮತ್ತೆ ಚರ್ಚೆ ಮುನ್ನಲೆಗೆ ಬಂದಿದೆ. ಸಂಪುಟ ಸರ್ಜರಿ ಕಾಲ ಸನ್ನಿಹಿತ ಎನ್ನಲಾಗುತ್ತಿದೆ. ಯತ್ನಾಳ್ ಹೇಳಿಕೆ, ವಿಜಯೇಂದ್ರ ಹೈಕಮಾಂಡ್ ಭೇಟಿ, ನಿರಾಣಿ ದೆಹಲಿ ಪ್ರವಾಸ ಕ್ಯಾಬಿನೆಟ್ ಸರ್ಜರಿ ಕುರಿತು ಚರ್ಚೆಗೆ ಇಂಬು ತಂದಿದೆ. ಇವೆಲ್ಲವುಗಳ ನಡುವೆ ಯುಗಾದಿಗೆ ಬದಲಾವಣೆ ಪರ್ವ ಸನಡೆಯಬಹುದು ಎನ್ನಲಾಗುತ್ತಿದೆ.
ಸಂಪುಟ ಸರ್ಜರಿ ಕುರಿತು ಚರ್ಚೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಗೆ ಅಡ್ಡಿಯಾಗಿದ್ದ ಪಂಚ ರಾಜ್ಯಗಳ ಚುನಾವಣೆ ಮುಗಿದಿದೆ. ಫಲಿತಾಂಶವೂ ಬಿಜೆಪಿ ಪರವಾಗಿ ಬಂದಿದ್ದು, ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೇರಿದೆ. ಇದೀಗ ವರಿಷ್ಠರು ನಿರಾಳರಾಗಿದ್ದು, ರಾಜ್ಯದತ್ತ ಚಿತ್ತ ಹರಿಸುವುದು ಬಹುತೇಕ ಪಕ್ಕಾ ಆಗಿದೆ. ಯಾವಾಗ ಬೇಕಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆಸಿಕೊಂಡು ಸಂಪುಟ ಸರ್ಜರಿ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಅವುಗಳ ಭರ್ತಿ ಜೊತೆ ಕೆಲ ಹಿರಿಯ ಸಚಿವರನ್ನು ಸಂಘಟನೆಗೆ ಬಳಸಿಕೊಳ್ಳುವುದು ಮತ್ತು ನಿರೀಕ್ಷಿತ ಸಾಧನೆ ತೋರದ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎನ್ನುವ ಸಿಎಂ ಮನವಿಗೆ ಹೈಕಮಾಂಡ್ ಈಗ ಸ್ಪಂದಿಸಲಿದೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ವಿಜಯೇಂದ್ರಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎನ್ನುವುದು ಯಡಿಯೂರಪ್ಪ ಬೇಡಿಕೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡಿ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಲು ಅವರ ಬೇಡಿಕೆ ಪರಿಗಣಿಸಬೇಕಾಗಿದೆ. ಈ ಕುರಿತು ಹಾಗು ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಮಾತುಕತೆ ನಡೆದಿದೆ ಎಂದು ತಿಳಿದುಬಂದಿದೆ.
ಇದರ ಜೊತೆ ಸಿಎಂ ಅಭ್ಯರ್ಥಿ ಎಂದು ಕರೆಸಿಕೊಂಡಿದ್ದ ಸಚಿವ ಮುರುಗೇಶ್ ನಿರಾಣಿ ಪಂಚ ರಾಜ್ಯಗಳ ಫಲಿತಾಂಶದಂದು ದೆಹಲಿ ಪ್ರವಾಸ ಮಾಡಿದ್ದಾರೆ. ವರಿಷ್ಠರ ಭೇಟಿಗೆ ಯತ್ನಿಸಿದ್ದಾರೆ. ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನಿರಾಣಿ ದೆಹಲಿ ಭೇಟಿ ಕುತೂಹಲ ಮೂಡುವಂತೆ ಮಾಡಿದೆ. ಇನ್ನು ಬಿಜೆಪಿ ರೆಬೆಲ್ ನಾಯಕ ಎಂದು ಕರೆಸಿಕೊಳ್ಳುತ್ತಿರುವ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್, ಸಂಪುಟದಲ್ಲಿ ಬದಲಾವಣೆ ಆಗಲಿದೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಪತಿ, ಇತ್ತ ಪತ್ನಿಯ ವಿವಾಹೇತರ ಸಂಬಂಧ: ಕುಡಿದ ಮತ್ತಲ್ಲಿ ಕತ್ತು ಕೊಯ್ದ ಪ್ರಿಯಕರ!
ನಾಯಕತ್ವ ಬದಲಾವಣೆ ಇಲ್ಲ.ಆದರೆ,ವರಿಷ್ಠರು ಸಂಪುಟ ಸರ್ಜರಿ ಮಾಡಲಿದ್ದಾರೆ ಅದಕ್ಕೆ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ, ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುಳಿವನ್ನ ಈ ಹಿಂದೆ ಯತ್ನಾಳ್ ನೀಡಿದ್ದರು ಈಗ ಸಂಪಟ ಸರ್ಜರಿ ಸುಳಿವು ನೀಡುತ್ತಿದ್ದು ಆಕಾಂಕ್ಷಿಗಳಲ್ಲಿ ಕುತೂಹಲ, ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವವರಲ್ಲಿ ತಳಮಳ ಸೃಷ್ಟಿಸಿದೆ.
ಯುಗಾದಿಗೆ ಆಗುತ್ತಾ ಸಂಪುಟ ಬದಲಾವಣೆ?: ಕಳೆದ ದೆಹಲಿ ಪ್ರವಾಸದ ವೇಳೆಯಲ್ಲಿಯೇ ವರಿಷ್ಠರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಜೆಟ್ ಅಧಿವೇಶನ ಮುಗಿಯುವವರೆಗೂ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಬರಬೇಡಿ, ಅಧಿವೇಶನ ಮುಗಿದ ನಂತರ ಬನ್ನಿ ಎಂದು ಸ್ಪಷ್ಟವಾಗಿ ಹೇಳಿ ಕಳುಹಿಸಿದ್ದಾರೆ. ಹಾಗಾಗಿ ಈಗ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದರೂ ತಕ್ಷಣಕ್ಕೆ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನಲಾಗುತ್ತಿದೆ. ಮಾರ್ಚ್ ಅಂತ್ಯದವರೆಗೂ ಬಜೆಟ್ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೂ ಸಂಪುಟದಲ್ಲಿ ಯಾವ ಬದಲಾವಣೆ ಇಲ್ಲ, ಯುಗಾದಿಗೆ ಸಂಪುಟದಲ್ಲಿಯೂ ಬದಲಾವಣೆಯ ಹೊಸ ಪರ್ವ ಆಗಬಹುದು ಎನ್ನಲಾಗುತ್ತಿದೆ.
ಈಗಾಗಲೇ ಸಂಪುಟಕ್ಕೆ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಆರ್.ಎಸ್.ಎಸ್. ಕೆಲವೊಂದು ನಿರ್ದೇಶನಗಳನ್ನು ನೀಡಿದೆ.ರಾಜ್ಯ ಘಟಕವೂ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದೆ. ಈಗಾಗಲೇ ಸಂಭವನೀಯ ಬದಲಾವಣೆ ಕುರಿತ ಪಟ್ಟಿಯನ್ನು ಸಿಎಂ ಹೈಕಮಾಂಡ್ ನಾಯಕರಿಗೆ ತಲುಪಿಸಿದ್ದಾರೆ. ಈಗೇನಿದ್ದರೂ ಹೈಕಮಾಂಡ್ ನಿರ್ಧಾರ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.
ಸ್ಥಳೀಯ ನಾಯಕತ್ವಕ್ಕೆ ಮನ್ನಣೆ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮೋದಿ ವರ್ಚಸ್ಸು, ಸ್ಥಳೀಯ ನಾಯಕತ್ವ ಎರಡೂ ಫ್ಯಾಕ್ಟರ್ ಇಲ್ಲಿ ಕೆಲಸ ಮಾಡಿದೆ. ಇನ್ನು ಮುಂದಿನ ವರ್ಷ ರಾಜ್ಯದಲ್ಲಿಯೂ ಚುನಾವಣೆ ನಡೆಯಲಿದ್ದು, ಇಲ್ಲಿಯೂ ಸ್ಥಳೀಯ ನಾಯಕತ್ವ ಮುಖ್ಯ ಪಾತ್ರ ವಹಿಸಲಿದೆ. ಒಂದು ಕಡೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯಮಟ್ಟದ ವರ್ಚಸ್ಸು ಬೆಳೆಸಿಕೊಂಡಿಲ್ಲ. ಮತ್ತೊಂದು ಕಡೆ ನಾಯಕತ್ವ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಸ್ ಲೀಡರ್ ಆಗಿ ಹೊರಹೊಮ್ಮೊಲ್ಲ. ಇದು ಬಿಜೆಪಿಗೆ ಅಲ್ಪ ಮಟ್ಟಿನ ಆತಂಕಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಮಾಸ್ ಲೀಡರ್ ಯಾರೂ ಇಲ್ಲದಂತಾಗಿದೆ ಹಾಗಾಗಿ ಯಡಿಯೂರಪ್ಪ ಅವರನ್ನೂ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ಬಿಜೆಪಿ ಸಿದ್ಧವಾಗಿದೆ.
ಹೈಕಮಾಂಡ್ ನಿರ್ದೇಶನದಂತೆ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಅನುಮತಿಸಿದ್ದು, ರಾಜ್ಯ ನಾಯಕರೂ ಭಾಗಿಯಾಗುವಂತೆ ಸೂಚಿಸಿದೆ. ಹಾಗಾಗಿಯೇ ಬಿಜೆಪಿ ವಿಜಯೋತ್ಸವ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸ ಮಾಡುವ ಘೋಷಣೆ ಮಾಡಿದ್ದಾರೆ.