ಬೆಂಗಳೂರು: ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ದಿನಾಂಕ ನಿಗದಿ, 2021ನೇ ಸಾಲಿಗೆ ಸಾರ್ವತ್ರಿಕ ರಜೆ ಹಾಗೂ ಪರಿಮಿತ ರಜೆಗಳನ್ನು ಘೋಷಿಸುವುದು ಸೇರಿದಂತೆ ಹಲವು ಮಹತ್ವದ ವಿಷಯಗಳಿಗೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುರ್ತಾಗಿ ದೆಹಲಿಗೆ ಹೋಗಬೇಕಿರುವುದರಿಂದ ಗುರುವಾರ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ. 2020-21ನೇ ಸಾಲಿಗೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತಕ್ಕೆ ಐಇಬಿಆರ್ ಅಡಿ 500 ಕೋಟಿ ರೂ. ಹಣವನ್ನು ಅವಧಿ ಸಾಲಗಳ ಮೂಲಕ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡಿ ಆದೇಶ ಹೊರಡಿಸುವ ಸಂಭವ ಇದೆ.
2020-21 ನೇ ಸಾಲಿಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತಕ್ಕೆ ಐಇಬಿಆರ್ ಅಡಿ 650 ಕೋಟಿ ರೂ. ಹಣವನ್ನು ಅವಧಿ ಸಾಲಗಳ ಮೂಲಕ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ಹಾಗೂ 2020 - 21ನೇ ಸಾಲಿಗೆ ಕಾವೇರಿ ನೀರಾವರಿ ನಿಗಮ ನಿಯಮಿತಕ್ಕೆ ಐಇಬಿಆರ್ ಅಡಿ 250 ಕೋಟಿ ರೂ. ಅವಧಿ ಸಾಲಗಳ ಮೂಲಕ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
2020-21ನೇ ಸಾಲಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತಕ್ಕೆ ಐಇಬಿಆರ್ ಅಡಿ 250 ಕೋಟಿ ರೂ. ಅವಧಿ ಸಾಲಗಳ ಮೂಲಕ ಸಂಗ್ರಹಿಸಲು ಸರ್ಕಾರಿ ಖಾತರಿ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡುವ ಸಾಧ್ಯತೆ ಇದೆ. ಬೆಳಗಾವಿ ನಗರದ ದಕ್ಷಿಣ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ತಯಾರಿಸಲಾದ 28.63 ಕೋಟಿ ರೂ. ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರ ಸಭೆಯ ವ್ಯಾಪ್ತಿಯಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ 13.85 ಕೋಟಿ ರೂ. ಆಡಳಿತಾತ್ಮಕ ಅನುಮೋದನೆ ನೀಡುವುದು. ಕರ್ನಾಟಕ ಕೃಷಿ ಸೇವೆಗಳು (ನೇಮಕಾತಿ) ನಿಯಮ 2020 ಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ.