ಬೆಂಗಳೂರು : ಲಿಂಗಾಯತ - ವೀರಶೈವ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ ಬೇರೆ ಸಮುದಾಯವೂ ಬೇಡಿಕೆ ಇಡುವ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿ ಹೈಕಮಾಂಡ್ ರಂಗ ಪ್ರವೇಶ ಮಾಡಿದೆ. ಹಾಗಾಗಿ, ಇಂದಿನ ಸಚಿವ ಸಂಪುಟ ಸಭೆಯಲ್ಕಿ ವೀರಶೈವ - ಲಿಂಗಾಯಿತರನ್ನು ಒಬಿಸಿಗೆ ಸೇರಿಸುವ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಲಿಂಗಾಯತ ಕುರುಬ, ಲಿಂಗಾಯತ ಅಗಸ, ಮಲಗಾರ್, ಗಾಣಿಗ, ಲಿಂಗಾಯತ ನಾಯಿಂದ, ಲಿಂಗಾಯತ ಹೂಗಾರ ಸೇರಿದಂತೆ 16 ಉಪಜಾತಿಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ಬಿಟ್ಟು ಹೋಗಿರುವ ಉಳಿದ ಉಪಜಾತಿಗಳನ್ನೂ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು 36 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸುವಂತೆ ವೀರಶೈವ ಲಿಂಗಾಯಿತ ಮಹಾಸಭಾ ಕೂಡ ಸರ್ಕಾರಕ್ಕೆ ಮನವಿ ಮಾಡಿತ್ತು. ಮೇಲಾಗಿ ನಾವು ರಾಜ್ಯದ ಮೀಸಲು ಪಟ್ಟಿ ಬದಲಾವಣೆಗೆ ಉದ್ದೇಶಿಸಿಲ್ಲ. ಕೇಂದ್ರ ಸರ್ಕಾರದ ಮೀಸಲು ಪಟ್ಟಿ ಸೇರ್ಪಡೆಗೆ ಶಿಫಾರಸು ಮಾಡಲು ಉದ್ದೇಶಿದ್ದೆವು ಎಂದು ತಿಳಿಸಿದರು.
ವೀರಶೈವ - ಲಿಂಗಾಯತ ಮೀಸಲಾತಿ ವಿಚಾರ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಕೇಂದ್ರಕ್ಕೆ ಶಿಫಾರಸು ಮಾಡುವುದು. ಒಕ್ಕಲಿಗ ಕುಂಚಿಟಿಗ ಸೇರಿ ಇತರ ಸಮುದಾಯದ ಬೇಡಿಕೆಯೂ ಇರುವುದರಿಂದ ಒಟ್ಟಿಗೆ ಸಮಾಲೋಚನೆ ಮಾಡಿ ಕಳುಹಿಸಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಸಂಪುಟ ಸಭೆಯಲ್ಲಿ ಇದನ್ನು ಮುಂದೂಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಸಮಜಾಯಿಷಿ ನೀಡಿದರು.
ವೀರಶೈವ - ಲಿಂಗಾಯಿತ ಸಮುದಾಯವನ್ನು ಒಬಿಸಿ ಸೇರ್ಪಡೆಗೆ ಶಿಫಾರಸು ಮಾಡಲು ಚಿಂತನೆ ಇತ್ತು. ಆದರೆ, ಒಕ್ಕಲಿಗರ ಕುಂಚಟಿಗರು ಸೇರಿದಂತೆ ಹಲವು ಸಮುದಾಯಗಳು ಬಿಟ್ಟು ಹೋಗಿರುವ ಹಿನ್ನೆಲೆಯಲ್ಲಿ ಕೇಂದ್ರದ ಜತೆ ಚರ್ಚಿಸಿ ಬಳಿಕ ನಂತರ ತೀರ್ಮಾನಿಸಲು ನಿರ್ಧರಿಸಿ ಇಂದು ಕ್ಯಾಬಿನೆಟ್ ನಲ್ಲಿ ಈ ವಿಷಯವನ್ನು ಕೈಬಿಡಲಾಯಿತು ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ವಿಸ್ತರಣೆ ವಿಷಯಕ್ಕೆ ಕೇಂದ್ರದ ವರಿಷ್ಟರು ವಿಳಂಬ ಮಾಡಿರುವುದಕ್ಕೂ ವೀರಶೈವ ಲಿಂಗಾಯಿತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದ ಅವರು, ಮಹತ್ವದ ಕಾರಣಕ್ಕೆ ಲಿಂಗಾಯತರ ಬಗ್ಗೆ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದೆವು. ಆದರೆ, ದೆಹಲಿಗೆ ಹೋಗಿ ಚರ್ಚಿಸಿದ ಬಳಿಕ ಅದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಯಾವುದೇ ಆತುರದ ತೀರ್ಮಾನ ಕೈಗೊಳ್ಳದಂತೆ ಸಂಪುಟ ಸಹೋದ್ಯೋಗಿಗಳು ಸಲಹೆ ಮಾಡಿದ್ದಾರೆ. ಹಾಗಾಗಿ ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.