ಬೆಂಗಳೂರು: ಸಂಕ್ರಾಂತಿವರೆಗೂ ಸಚಿವ ಸ್ಥಾನದ ಬೇಡಿಕೆಯನ್ನು ನನ್ನ ಮುಂದೆ ಇರಿಸಬೇಡಿ ಎಂದು ಎಂಟಿಬಿ ನಾಗರಾಜ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಸೂಚನೆ ನೀಡಿದ್ದು, ಸಚಿವಾಕಾಂಕ್ಷಿಗಳು ಸಂಪುಟ ಸೇರಲು ಮತ್ತೊಂದು ತಿಂಗಳು ಕಾಯಬೇಕಾಗಿದೆ.
ಸಾರಿಗೆ ಸಿಬ್ಬಂದಿ ಮುಷ್ಕರದ ಹಿನ್ನೆಲೆ ಸರಣಿ ಸಭೆಯಲ್ಲಿ ನಿರತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಚಿವಾಕಾಂಕ್ಷಿಗಳ ಬೇಡಿಕೆ ಕಿರಿಕಿರಿ ತರಿಸಿದೆ. ಸಂಯಮ ಕಳೆದುಕೊಂಡು ತುಸು ಜೋರಾಗಿಯೇ ಸಂಕ್ರಾಂತಿವರೆಗೂ ಸಂಪುಟ ವಿಸ್ತರಣೆ ಬೇಡಿಕೆ ಇಟ್ಟುಕೊಂಡು ಬರಬೇಡಿ ಎಂದು ಎಂಟಿಬಿ ನಾಗರಾಜ್ಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.
ಸಿಎಂ ಗೃಹ ಕಚೇರಿ ಕಾವೇರಿಗೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಆಗಷ್ಟೇ ಹಿರಿಯ ಸಚಿವರ ಸಭೆ ಮುಗಿಸಿ ಕುಳಿತಿದ್ದ ಸಿಎಂ ಯಡಿಯೂರಪ್ಪರನ್ನು ಭೇಟಿಯಾದರು. ಸಾರಿಗೆ ನೌಕರರ ಬೇಡಿಕೆ ಆಯಿತು, ನಮ್ಮ ಬೇಡಿಕೆ ಕಥೆ ಏನೆಂದು ಪ್ರಸ್ತಾಪಿಸಿದ್ದಾರೆ. ಇದಕ್ಕೆ ತುಸು ಅಸಮಧಾನಗೊಂಡ ಸಿಎಂ, ಇನ್ನೊಂದು ತಿಂಗಳು ಸಚಿವ ಸ್ಥಾನದ ಬಗ್ಗೆ ಮಾತನಾಡಲೇಬೇಡಿ. ಸಂಕ್ರಾಂತಿವರೆಗೂ ಕಾಯಿರಿ ಎಂದು ಹೇಳಿ ನಿವಾಸದ ಒಳಗೆ ತೆರಳಿದರು ಎನ್ನಲಾಗ್ತಿದೆ.
ಸಿಎಂ ಯಡಿಯೂರಪ್ಪ ಅವರಿಂದ ಇಂತಹ ಉತ್ತರ ನಿರೀಕ್ಷೆ ಮಾಡದ ಎಂಟಿಬಿ ನಿರಾಸೆಯಿಂದ ಹೊರಬಂದಿದ್ದಾರೆ. ಸಿಎಂ ನಿವಾಸದ ಹೊರಗಡೆ ಇದ್ದ ಅಶೋಕ್ ಜೊತೆ ಕೆಲಕಾಲ ಮಾತನಾಡಿ ಬೇಸರದೊಂದಿಗೆ ನಿರ್ಗಮಿಸಿದರು.
ಯಡಿಯೂರಪ್ಪ ಅವರ ಇಂದಿನ ನಡೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ. ಅಧಿವೇಶನ ಮುಗಿದಿದೆ, ಇನ್ನೇನು ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಮತ್ತೊಂದು ತಿಂಗಳು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ ಜೊತೆ ಮೂಲ ಬಿಜೆಪಿಯ ಕೆಲ ಆಕಾಂಕ್ಷಿಗಳು ಮತ್ತಷ್ಟು ದಿನ ಕಾಯದೆ ಬೇರೆ ದಾರಿ ಇಲ್ಲವಾಗಿದೆ.
ಇದನ್ನು ಓದಿ:ಕೋಡಿಹಳ್ಳಿ ಇಲ್ಲೊಂದು-ಅಲ್ಲೊಂದು ಮಾತಾಡೋದು ಸರಿಯಲ್ಲ : ಸಚಿವ ಆರ್.ಅಶೋಕ್