ಬೆಂಗಳೂರು: ಮೂರ್ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದು ತಿಂಗಳಾಂತ್ಯದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಬಿ.ಸಿ ಪಾಟೀಲ್ ಹೇಳಿದ್ದಾರೆ.
ವಿದೇಶದಿಂದ ಸಿಎಂ ಹಿಂದಿರುಗುತ್ತಿದ್ದಂತೆ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಶಾಸಕ ಬಿ.ಸಿ ಪಾಟೀಲ್ ಭೇಟಿ ನೀಡಿದರು. ಸಚಿವ ಸ್ಥಾನದ ಅಪೇಕ್ಷೆ ಮುಂದಿಟ್ಡು ವಿಳಂಬ ಮಾಡದಂತೆ ಮನವಿ ಮಾಡಿದರು. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಸಿಎಂ ಭೇಟಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಬಿ.ಸಿ ಪಾಟೀಲ್, ವಿದೇಶ ಪ್ರವಾಸ ಮುಗಿಸಿ ಸಿಎಂ ವಾಪಸ್ ಬಂದಿದ್ದಾರೆ. ಹಾಗಾಗಿ, ಅವರಿಗೆ ಅಭಿನಂದಿಸಲು ಬಂದಿದ್ದೆ, ಇನ್ನು ಎರಡು ಮೂರು ದಿನದಲ್ಲಿ ಸಚಿವ ಸಂಪುಟ ರಚನೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ. ದಾವೋಸ್ ನಿಂದ ಬಂದ ಕೂಡಲೇ ಈ ಮಾತನ್ನು ಅವರು ನಮಗೆ ತಿಳಿಸಿದ್ದಾರೆ. ಇನ್ನು ಮೂರು ನಾಲ್ಕು ದಿನದಲ್ಲಿ ಸಂಪುಟ ವಿಸ್ತರಣೆ ಆಗುವುದು ಖಚಿತ ಎಂದರು.
ಗೆದ್ದವರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಚರ್ಚೆ ಮಾಡುವುದು ನನ್ನ ವ್ಯಾಪ್ತಿಯಲ್ಲಿಲ್ಲ ಅದನ್ನು ಮುಖ್ಯಮಂತ್ರಿಗಳು ಹೇಳಬೇಕು ನಮ್ಮಲ್ಲಿ ಕೆಲವರನ್ನು ಸಂಪುಟಕ್ಕೆ ತೆಗೆದುಕೊಂಡು ಕೆಲವರನ್ನು ಬಿಡುತ್ತಾರೆ ಎನ್ನುವ ಮಾತುಗಳ ಕುರಿತು ಈಗ ಚರ್ಚೆ ಮಾಡುವುದಿಲ್ಲ. ಆದರೆ ಸಂಪುಟ ವಿಸ್ತರಣೆ ಆಗುತ್ತದೆ ಎನ್ನುವ ವಿಶ್ವಾಸ ಇದೆ ಅಗತ್ಯಬಿದ್ದರೆ ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ ಎಂದರು.
ನಾನು ಯಾವ ಖಾತೆಗೆ ಬೇಡಿಕೆಯನ್ನು ಇಟ್ಟಿಲ್ಲ ಯಾವುದೇ ಖಾತೆ ಕೊಟ್ಟರು ನಿರ್ವಹಿಸುವ ಶಕ್ತಿ ಇದೆ ಮುಖ್ಯಮಂತ್ರಿಗಳು ನೀಡುವ ಖಾತೆಯನ್ನು ನಿಭಾಯಿಸುತ್ತೇನೆ ಎಂದರು.