ನವದೆಹಲಿ: ಇಂದು ಕೇಂದ್ರ ನಾಯಕರೊಂದಿಗೆ ನಡೆಯುವ ಸಭೆಯಲ್ಲಿ ಸಚಿವರ ಪಟ್ಟಿ ಅಂತಿಮಗೊಂಡರೆ ಬುಧವಾರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಭಾನುವಾರ ಸಂಜೆ ಸಿಎಂ ಬೊಮ್ಮಾಯಿ ಹೈಕಮಾಂಡ್ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಇಂದು ಅಮಿತ್ ಶಾ ಭೇಟಿಗೂ ಮುನ್ನ ಮಾತನಾಡಿ, ಇಂದು ಅಥವಾ ನಾಳೆ ಸಚಿವರ ಪಟ್ಟಿ ಅಂತಿಮಗೊಳ್ಳಲಿದೆ. ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ. ಇಂದು ಸಂಜೆ ಜೆ.ಪಿ.ನಡ್ಡಾ ಅವರ ಭೇಟಿಗಾಗಿ ಸಮಯ ನಿಗದಿಯಾಗಿದೆ ಎಂದರು.
ಸಚಿವ ಸಂಪುಟ ರಚನೆ ಕುರಿತು ಬಿಜೆಪಿ ವರಿಷ್ಠರೊಂದಿಗೆ ಸಮಗ್ರ ಚರ್ಚೆ ನಡೆಸಲಾಗುವುದು. ಹಲವು ಹಂತಗಳಲ್ಲಿ ಸಂಪುಟ ವಿಸ್ತರಣೆ ಮಾಡಬೇಕೇ ಅಥವಾ ಒಂದೇ ಬಾರಿ ಸಂಪುಟ ವಿಸ್ತರಿಸಿದರೆ ಸಾಕೇ ಎಂಬುದರ ಕುರಿತಾಗಿಯೂ ಮಾತುಕತೆ ನಡೆಸಲಾಗುವುದು. ಪ್ರಾದೇಶಿಕ, ಸಾಮಾಜಿಕ ಪ್ರಾತಿನಿಧ್ಯದಡಿ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಎಷ್ಟು ಡಿಸಿಎಂಗಳನ್ನು ಮಾಡಬೇಕೆಂದು ಈ ಸಭೆಯಲ್ಲೇ ನಿರ್ಧರಿಸಲಾಗುವುದು. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಲಾಗುವುದು. ಕ್ಯಾಬಿನೆಟ್ ರಚನೆ ಬಗ್ಗೆ ಇಂದು ನಿರ್ಧಾರವಾಗುವುದು. ಸಚಿವರು ರಾಜ್ಯದ ಜನರ ಸೇವೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ವೈರಲ್ ಆದ 'ಎಸ್.ಆರ್ ಬೊಮ್ಮಾಯಿ' ಸಂಭಾವ್ಯ ಸಂಪುಟದಲ್ಲಿ ಇವರಿಗೆಲ್ಲಾ ಸಚಿವ ಸ್ಥಾನ..
ಕೆಲ ಸಚಿವಾಕಾಂಕ್ಷಿಗಳು ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೆ, ಎಲ್ಲರೂ ಮಂತ್ರಿಗಳಾಗಲು ಸಾಧ್ಯವಿಲ್ಲ ಎಂದು ಅವರಿಗೂ ತಿಳಿದಿದೆ. ಹಿಂದಿನ ಕ್ಯಾಬಿನೆಟ್ ಟೀಂ ಗಮನದಲ್ಲಿಟ್ಟುಕೊಂಡು ಈಗಿನ ಸಂಪುಟ ರಚನೆ ಮಾಡುತ್ತೇವೆ ಎಂದರು.