ಬೆಂಗಳೂರು: ನಿಗೂಢವಾಗಿ ಕಣ್ಮರೆಯಾಗಿ ಬಾಗಲೂರಿನಲ್ಲಿ ಶವವಾಗಿ ಪತ್ತೆಯಾಗಿದ್ದ ಮಹಿಳೆ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಪ್ರತಿದಿನ ಕಂಪನಿಗೆ ಕರೆದೊಯ್ಯುತ್ತಿದ್ದ ಕ್ಯಾಬ್ ಚಾಲಕನೇ ಕೊಲೆ ಮಾಡಿರುವುದನ್ನು ಪತ್ತೆಹಚ್ಚಿದ್ದಾರೆ. ಮೊಬೈಲ್ ನಂಬರ್ ಬ್ಲಾಕ್ ಮಾಡ್ತೀನಿ ಎಂದಿದ್ದಕ್ಕೆ ಜಾಕ್ ರಾಡ್ ನಿಂದ ಹೊಡೆದು ಹತ್ಯೆ ಮಾಡಿ ಶವ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪಾ (48) ಕೊಲೆಯಾದ ಮಹಿಳೆ. ಕೊಲೆ ಮಾಡಿರುವ ಆರೋಪದಡಿ ಉತ್ತರ ಕರ್ನಾಟಕ ಮೂಲದ 22 ವರ್ಷದ ಭೀಮರಾಯನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದಿರಾನಗರದಲ್ಲಿ ವಾಸವಾಗಿದ್ದ ದೀಪಾ ಹೊಸಕೋಟೆಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯ ಇಂದಿರಾನಗರದಿಂದ ಹೊಸಕೋಟೆಗೆ ಪಿಕಪ್ ಅಂಡ್ ಡ್ರಾಪ್ ಮಾಡುತ್ತಿದ್ದ. ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿದೆ. ಈ ಮಧ್ಯೆ ನಂದಿಬೆಟ್ಟಕ್ಕೆ ಹೋಗಿ ಬರೋಣ ಎಂದು ಆರೋಪಿ ಭೀಮರಾಯ ಮಹಿಳೆಗೆ ಆಹ್ವಾನಿಸಿದ್ದ. ಇದಕ್ಕೆ ಮಹಿಳೆ ನಿರಾಕರಿಸಿದ್ದರು.
ಈ ಮಧ್ಯೆ ಏಕಾಏಕಿ ಮಹಿಳೆ ನಾಪತ್ತೆಯಾಗಿದ್ದರು. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಕಣ್ಮರೆ ಪ್ರಕರಣ ದಾಖಲಾಗಿತ್ತು. ಮಾರ್ಚ್ 4 ರಂದು ಬಾಗಲೂರಿನಲ್ಲಿ ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ದೀಪಾಳ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಾಗಲೂರು ಪೊಲೀಸರು ತನಿಖೆ ವೇಳೆ ಇಂದಿರಾನಗರದಲ್ಲಿ ನಾಪತ್ತೆಯಾಗಿದ್ದ ದೀಪಾ ಎಂಬುದನ್ನ ಪತ್ತೆ ಹಚ್ಚಿದ್ದಾರೆ.
ಅಂದು ಆಗಿದ್ದೇನು ? ಪೊಲೀಸರು ಹೇಳುವುದೇನು?: ಫೆಬ್ರವರಿ 5 ರಂದು ಸಂಜೆ ದೀಪಾ ಕರೆ ಮಾಡಿ ಚಾಲಕ ಭೀಮಾರಾಯನನ್ನು ಕರೆಯಿಸಿಕೊಂಡಿದ್ದರು. ಹಲಸೂರಿನ ಕೆಂಬ್ರಿಡ್ಜ್ ಲೇಔಟ್ನಲ್ಲಿ ಹೊಟೇಲ್ ಕರೆದೊಯ್ದಿದ್ದರು. ಆಗ ದೀಪಾ ಮತ್ತು ಆರೋಪಿ ಭೀಮರಾಯನ ಜೊತೆ ಮಾತುಕತೆ ನಡೆದಿದ್ದು, ದೀಪಾ ನನಗೆ ಯಾವುದೇ ಗೆಳೆತನ ಇಷ್ಟವಿಲ್ಲ. ಈ ಬಗ್ಗೆ ಒತ್ತಡ ಹೇರಿದರೆ ಮೊಬೈಲ್ ನಂಬರ್ ಬ್ಲಾಕ್ ಮಾಡುವೆ ಎಂದಿದ್ದಾಳೆ. ಇದರಿಂದ ಆಕ್ರೋಶಗೊಂಡ ಭೀಮರಾಯ ಕಾರಿನ ಜಾಕ್ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಶವವನ್ನ ಕಾರಿನಲ್ಲಿ ಹಾಕಿಕೊಂಡು ಬಾಗಲೂರಿನ ನಿರ್ಜನ ಪ್ರದೇಶವೊಂದರಲ್ಲಿ ಶವ ಎಸೆದು ಪರಾರಿಯಾಗಿದ್ದ. ದೀಪಾ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ದಾವಣಗೆರೆ ಚಾಕುವಿನಿಂದ ಇರಿದು ಗೃಹಿಣಿಯ ಹತ್ಯೆ ಮಾಡಿದ ಪಾಗಲ್ ಪ್ರೇಮಿ: ಹುಚ್ಚು ಪ್ರೇಮಿಯೊಬ್ಬ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಗೃಹಿಣಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದಲ್ಲಿ ಮಾರ್ಚ್ 7ರಂದು ನಡೆದಿದೆ. ಪ್ರತಿಭಾ ನಾಗರಾಜ್ (25) ಕೊಲೆಯಾದವರು. ಮೂಕಪ್ಪನವರ ಹನುಮಂತ ಕೊಲೆ ಆರೋಪಿ. ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹನುಮಂತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರೀತಿಸಿದವಳು ಕೈಗೆ ಸಿಗಲಿಲ್ಲ ಎಂದು ಪ್ರತಿಭಾಳನ್ನು ಆರೋಪಿ ಕೊಲೆ ಮಾಡಿದ್ದಾನೆ. ಮಹಿಳೆಯ ಸುಖಮಯ ದಾಂಪತ್ಯ ಜೀವನ ಸಹಿಸದೇ ಕಿಡಿಗೇಡಿ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಕೋಲಾರ: ಅರೆಬೆಂದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ