ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಕ್ಕಲಿಗ ನಾಯಕರಿಂದಲೇ ಅಡ್ಡಿಯಾಗುತ್ತಿದೆ ಎನ್ನುವುದು ಸರಿಯಲ್ಲ. ನಾನು ಪಕ್ಷದಲ್ಲಿ ಏನನ್ನೂ ಕೇಳಿ ಪಡೆದಿಲ್ಲ. ನಾನೇನಾಗಬೇಕು ಎಂದು ಪಕ್ಷ ನಿರ್ಧರಿಸಲಿದೆ. ವಿಪಕ್ಷ ನಾಯಕ ಆರ್.ಅಶೋಕ್ ನನಗೆ ದೊಡ್ಡಣ್ಣ ಇದ್ದಂತೆ. ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ನನ್ನ ನೆಂಟ. ಇದರ ಬಗ್ಗೆ ಹೆಚ್ಚೇನೂ ಹೇಳಲ್ಲ ಎಂದು ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದನ್ನು ಅಶೋಕ್, ಅಶ್ವತ್ಥನಾರಾಯಣ ತಡೆಯುತ್ತಿದ್ದಾರೆ ಎನ್ನುವುದು ಸರಿಯಲ್ಲ. ಬೆಂಗಳೂರು ರಾಜಕಾರಣಕ್ಕೆ ಬರದಂತೆ ನನ್ನ ತಡೆಯುವ ಪ್ರಯತ್ನ ನಿರಾಧಾರ. ಎಲ್ಲರ ಜೊತೆ ನನ್ನ ಸಂಬಂಧ ಇದೆ. ಚೆನ್ನಾಗಿಲ್ಲದವರ ಜೊತೆಗೂ ಸಂಬಂಧ ಚೆನ್ನಾಗಿ ಇಡುತ್ತೇನೆ. ಅವಕಾಶ ಕೊಟ್ಟರೆ ಉಂಟು, ಕೊಡದಿದ್ದರೆ ಏನೂ ಇಲ್ಲ. ಅಶೋಕ್ ನನಗೆ ದೊಡ್ಡಣ್ಣ ಇದ್ದಂತೆ, ತಮ್ಮನ ಬಗ್ಗೆ ಹೆಚ್ಚು ಕಾಳಜಿ ಅವರಿಗಿದೆ. ಅಶ್ವತ್ಥನಾರಾಯಣ್ ನನ್ನ ನೆಂಟ, ನಮ್ಮೂರಿನ ಹೆಣ್ಣು ಮಗಳನ್ನೇ ಅವರಿದೆ ಕೊಟ್ಟಿರೋದು ಎಂದರು.
1995ರ ನಂತರ ಪಕ್ಷದಲ್ಲಿ ನಾನು ಕೇಳಿ ಪಡೆದಿದ್ದು ಕಡಿಮೆ. ಪಕ್ಷ ಹೇಳಿದ್ದನ್ನು ಮಾಡಿಕೊಂಡು ಬಂದಿದ್ದೇನೆ. ನನ್ನ ಜವಾಬ್ದಾರಿ ಪಕ್ಷ ಸಂಘಟನೆ, ಪಕ್ಷ ಬಲವರ್ಧನೆ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು? ಯಾವ ಚುನಾವಣೆಗೆ ಸ್ಪರ್ಧೆ ಮಾಡಬೇಕು? ಸ್ಪರ್ಧೆ ಮಾಡಬೇಕಾ? ಬೇಡವಾ? ಇದನ್ನು ಪಕ್ಷ ನಿರ್ಧರಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭಾ ಚುನಾವಣಾ ಸೋಲಿನ ಸೇಡು ತೀರಿಸಿಕೊಳ್ಳುತ್ತೇವೆ. ಈಗಾಗಲೇ ನಾನು ಚುನಾವಣೆ ಸಿದ್ದತೆ ಆರಂಭಿಸಿದ್ದು, ಅಗತ್ಯ ತಯಾರಿ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದರು.
ಬೋರ್ಡ್ ಎಷ್ಟು ಮುಖ್ಯವೋ ಕನ್ನಡ ಶಾಲೆಗಳೂ ಅಷ್ಟೇ ಮುಖ್ಯ: ಕರವೇ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಅದನ್ನು ನೋಡಿಕೊಂಡು ಕನ್ನಡ ಉಳಿಸಬೇಕು. ಇದೇ ನಮ್ಮ ಪಕ್ಷದ ಅಭಿಪ್ರಾಯವೂ ಹೌದು, ಕನ್ನಡ ಶಾಲೆಗಳು ಇವತ್ತು ಬಂದ್ ಆಗುತ್ತಿವೆ. ಇದರ ಬಗ್ಗೆ ನಾವು ಚಿಂತಿಸಬೇಕಿದೆ. ಕರ್ನಾಟಕ ಬೆಂಗಳೂರು ನಮಗೆ ಹೂಡಿಕೆಗೆ ಸುರಕ್ಷಿತವಲ್ಲ ಎನ್ನುವ ಭಾವನೆ ಅನ್ಯ ಭಾಷಿಕರಿಗೆ ಬರಬಾರದು. ಕನ್ನಡದ ಅಸ್ಮಿತೆ ಉಳಿಸಿಕೊಳ್ಳಬೇಕು. ಅದಕ್ಕೆ ನಮ್ಮ ಬೆಂಬಲ ಇದೆ.
ಸರೋಜಿನಿ ಮಹಿಷಿ ವರದಿ ಬಗ್ಗೆ ಬಹಳ ಚರ್ಚೆಯ ಆಗಿದೆ. ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆ ತೆರೆಯುತ್ತಿದೆ. ಕನ್ನಡ ಮಕ್ಕಳಿರುವ ಊರಿನಲ್ಲಿ ಕನ್ನಡ ಶಾಲೆ ಮುಚ್ಚುತ್ತಿವೆ. ಬೋರ್ಡ್ ಎಷ್ಟು ಮುಖ್ಯವೋ ಕನ್ನಡ ಶಾಲೆಗಳ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಕನ್ನಡಿಗರಿರುವ ಊರುಗಳಲ್ಲಿ ಕನ್ನಡ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ. ಇದರ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು ಎಂದು ಸಿ.ಟಿ.ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಡೋಂಗಿ ರಾಜಕಾರಣ ಎಂಬ ಸಿದ್ದರಾಮಯ್ಯ ಟೀಕೆಗೆ ಕಿಡಿಕಾರಿದ ಸಿ.ಟಿ.ರವಿ, ಡೋಂಗಿ ರಾಜಕಾರಣ ಯಾರದ್ದು ಎಂದು ಗೊತ್ತಿದೆ. ಸಮಾಜವಾದಿ ಕೈಯಲ್ಲಿ ಹೂಬ್ಲೋಟ್ ವಾಚ್, ಸಚಿವರೊಬ್ಬರು ಸ್ಪೆಷಲ್ ಫ್ಲೈಟ್ ವಿಡಿಯೋ ತೋರಿಸ್ತಾರೆ. ಇಂತಹ ಬರದ ಸನ್ನಿವೇಶದಲ್ಲಿ ಇದು ಬೇಕಾ? ಇನ್ನೊಬ್ಬ ಸಚಿವರು ರೈತರ ಬಗ್ಗೆ ಮಾತನಾಡ್ತಾರೆ. ಇದು ಡೋಂಗಿ ರಾಜಕಾರಣ. ಶಿವಾನಂದ ಪಾಟೀಲರನ್ನು, ಫ್ಲೈಟ್‌ನಲ್ಲಿ ಹೋಗುವವರನ್ನು ಸಂಪುಟದಲ್ಲಿ ಇಟ್ಟುಕೊಳ್ಳುತ್ತಾರೆ. ಇದು ಸಿದ್ದರಾಮಯ್ಯನವರ ಡೋಂಗಿ ರಾಜಕಾರಣ ಎಂದರು.
ಇದನ್ನೂ ಓದಿ: 'ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯ ನಾಯಕರಿಂದ ಒತ್ತಡ'