ಬೆಂಗಳೂರು : ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನವೊಲಿಸಲು ತೆರಳಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಘಟಾನುಘಟಿ ನಾಯಕರು ಬರಿಗೈಲಿ ಹಿಂದಿರುಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ ಮನವೊಲಿಸಲು ಕಾಂಗ್ರೆಸ್ ನಾಯಕರು ಬೆಳಿಗ್ಗೆಯಿಂದಲೂ ಪ್ರಯತ್ನಿಸುತ್ತಿದ್ದರು. ಬೆಳಗ್ಗೆ ರಾಮಲಿಂಗಾರೆಡ್ಡಿ ಅವರ ಲಕ್ಕಸಂದ್ರದ ನಿವಾಸದಲ್ಲಿ ಭೇಟಿ ಮಾಡಿದ್ದ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಹಿನ್ನಡೆ ಉಂಟಾಗಿತ್ತು.
ಆದರೆ, ಛಲಬಿಡದ ನಾಯಕರು ಸಚಿವ ಕೆ ಜೆ ಜಾರ್ಜ್ ಅವರನ್ನು ಮುಂದಿಟ್ಟು ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸುವ ಯತ್ನ ಮಾಡಿ ಸಂಜೆ 3ಗಂಟೆ ಹೊತ್ತಿಗೆ ರೆಡ್ಡಿ ತಮ್ಮ ಚಂದಾಪುರದ ತಮ್ಮ ಫಾರಂ ಹೌಸ್‌ನಲ್ಲಿದ್ದಾರೆ ಎಂಬ ಮಾಹಿತಿ ಪಡೆದು ರಾಜ್ಯ ನಾಯಕರಿಗೆ ಮಾಹಿತಿ ನೀಡಿದರು.
ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ ಕೆ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಖುದ್ದು ಸಿಎಂ ಕುಮಾರಸ್ವಾಮಿ ಕೂಡ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ರಾಜೀನಾಮೆ ವಾಪಸ್ ಪಡೆಯಲು ರಾಮಲಿಂಗಾರೆಡ್ಡಿ ಒಪ್ಪಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಕಾಂಗ್ರೆಸ್ ನಾಯಕರಲ್ಲಿ ಬಹುತೇಕ ಎಲ್ಲರೂ ವಾಪಸಾಗಿದ್ದಾರೆ.
ಸದ್ಯ ಡಿಸಿಎಂ ಪರಮೇಶ್ವರ್ ತಾಜ್ ವಿವಾಂತ ಹೋಟೆಲ್‌ಗೆ ತೆರಳಿದ್ದು ಅಲ್ಲಿ ಶಾಸಕರೊಂದಿಗೆ ಚರ್ಚಿಸಲಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ನಿರಾಶರಾಗಿ ರೆಡ್ಡಿ ಫಾರಂ ಹೌಸ್‌ನಿಂದ ವಾಪಸ್ ಬರುತ್ತಿದ್ದಾರೆ.
ಇವರು ಬಂದ ನಂತರವೂ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆ ಶಿವಕುಮಾರ್ ಮನವೊಲಿಸುವ ಯತ್ನ ಮುಂದುವರಿಸಿದ್ದಾರೆ. ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಾ. ಜಿ ಪರಮೇಶ್ವರ್, ಸಭೆ ಸುಗಮವಾಗಿ ನಡೆದಿದೆ. ಹೆಚ್ಚು ಏನೂ ಹೇಳುವುದಿಲ್ಲ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ನಾನು ಸಭೆಯಲ್ಲಿ ಇರಲಿಲ್ಲ. ಏನಾಯ್ತು ಅಂತಾ ಗೊತ್ತಿಲ್ಲ ಎಂದರು.