ಬೆಂಗಳೂರು : ಪ್ರತಿಪಕ್ಷ ಕಾಂಗ್ರೆಸ್ನ ತೀವ್ರ ಒತ್ತಡದ ನಡುವೆಯೂ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಕೊರೊನಾ ಸಂಬಂಧ ವಿಶೇಷ ಅಧಿವೇಶನ ಕರೆಯದೇ ಇರಲು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ನಿರ್ಧರಿಸಿದ್ದಾರೆ.
ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿರುವ ನಡುವೆ ಕಾಂಗ್ರೆಸ್ಗೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಂತೆ ಆಗಬಾರದು. ಪರಿಸ್ಥಿತಿಯ ಲಾಭ ಪಡೆಯುವ ಕಾಂಗ್ರೆಸ್ಗೆ ಅನುಕೂಲ ಮಾಡಿಕೊಡಬಾರದು ಎನ್ನುವ ಕಾರಣಕ್ಕೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯುವ ಗೋಜಿಗೆ ಬಿಜೆಪಿ ಸರ್ಕಾರ ಹೋಗುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಕೋವಿಡ್-19 ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತೊಡಗಿವೆ. ಇಷ್ಟು ದಿನ ಎನ್-95 ಮಾಸ್ಕ್, ವೆಂಟಿಲೇಟರ್, ಐಸೋಲೇಷನ್, ಸ್ಯಾನಿಟೈಸರ್, ಲ್ಯಾಬ್ ಎನ್ನುವ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದವು. ಕೊರತೆಗಳ ಬಗ್ಗೆ ಕಾಂಗ್ರೆಸ್ ಹೇಳಿಕೆ ನೀಡಿದರೆ, ಪೂರೈಕೆ ಬಗ್ಗೆ ಬಿಜೆಪಿ ಹೇಳಿಕೆ ನೀಡಿ ಸಮರ್ಥನೆ ಮಾಡಿಕೊಳ್ಳುತ್ತಿತ್ತು. ಆದರೆ, ಈಗ ವಲಸೆ ಕಾರ್ಮಿಕರ ವಿಚಾರದಲ್ಲಿ ಹೊಸ ರಾಜಕೀಯ ದಾಳ ಉರುಳಿಸುವ ಕೆಲಸ ಎರಡೂ ಪಕ್ಷಗಳಿಂದ ನಡೆಯುತ್ತಿದೆ.
ರಾಜಕೀಯ ಲಾಭದ ಲೆಕ್ಕಾಚಾರ : ಕಾರ್ಮಿಕರ ಪ್ರಯಾಣ ದರ ವಿಚಾರದ ಜಟಾಪಟಿ ಉಭಯ ಪಕ್ಷಗಳ ನಡುವೆ ನಡೆಯುತ್ತಿರುವ ರಾಜಕೀಯ ಲಾಭದ ಲೆಕ್ಕಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರ್ಕಾರ ವಲಸೆ ಕಾರ್ಮಿಕರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ನಂತರ ಕಾಂಗ್ರೆಸ್ನ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗುತ್ತಿದ್ದಂತೆ ವಿಧಾನಸಭೆ ವಿಶೇಷ ಅಧಿವೇಶನ ಕರೆಯಬೇಕು ಎನ್ನುವ ಮತ್ತೊಂದು ಅಸ್ತ್ರವನ್ನು ಪ್ರಯೋಗಿಸಿದೆ. ಅಧಿವೇಶನ ಕರೆದಲ್ಲಿ ಕೊರೊನಾ ನಿಯಂತ್ರಿಸಲು ಸರ್ಕಾರ ಕೈಗೊಂಡ ಕ್ರಮಗಳು, ಹಣಕಾಸು ಸ್ಥಿತಿಗತಿ, ವಲಸೆ ಕಾರ್ಮಿಕರ ವಿಚಾರದ ಮೇಲೆ ಚರ್ಚೆ ನಡೆಸುವಂತೆ ಪಟ್ಟು ಹಿಡಿಯುವುದು, ಸರ್ಕಾರ ಎರವು ನೀಡಿದ ಸಂದರ್ಭದಲ್ಲಿ ಪಕ್ಷದ ಚಿಹ್ನೆ ಹೆಸರು ಬಳಸಿ ಕಿಟ್ ವಿತರಣೆ ಮಾಡಿದ್ದ ಕುರಿತು,ಬಿಜೆಪಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ, ವಿಶೇಷ ಪ್ಯಾಕೇಜ್ನಲ್ಲೂ ಲೋಪದ ಚರ್ಚೆಗೆ ಪಟ್ಟುಹಿಡಿಯಲಿದೆ.
ಸರ್ಕಾರ ಚರ್ಚೆಗೆ ಅವಕಾಶ ನೀಡದೇ ಇದ್ದರೆ ಅಹೋರಾತ್ರಿ ಧರಣಿಯಂತಹ ಪ್ರಯತ್ನ ನಡೆಸಬಹುದು. ಒಂದು ವೇಳೆ ಚರ್ಚೆಗೆ ಅವಕಾಶ ನೀಡಿದರೆ ಕೊರೊನಾ ಸಂಬಂಧ ಎಲ್ಲಾ ವಿಷಯ ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆರೋಗ್ಯ ಇಲಾಖೆಯಲ್ಲಿ ಬರುವ ಕೊರೊನಾ ನಿಯಂತ್ರಣ ನಿರ್ವಹಣೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಡುತ್ತಿದ್ದಾರೆ. ಮಾಧ್ಯಮಗಳಿಗೆ ಸುರೇಶ್‌ಕುಮಾರ್ ವಿವರ ನೀಡುತ್ತಿದ್ದಾರೆ. ಹೀಗಾಗಿ ಸಚಿವರ ನಡುವೆ ಸಮನ್ವಯತೆ ಇಲ್ಲ ಎಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಸ್ವತಃ ಡಿಸಿಎಂ ಸೇರಿ ಐವರು ಸಚಿವರೇ ಹೋಂ ಕ್ವಾರಂಟೈನ್‌ಗೆ ಹೋಗಿ ಬಂದ ವಿಷಯ ಪ್ರಸ್ತಾಪಿಸಿ ಸಚಿವರಿಂದಲೇ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಟೀಕಿಸಲು ಪ್ಲಾನ್ ಮಾಡಿಕೊಂಡಿದೆ.
ಅಧಿವೇಶನದಲ್ಲಿ ನಡೆಯುವ ಚರ್ಚೆಗೆ ಅಂತಿಮವಾಗಿ ಸರ್ಕಾರ ಉತ್ತರ ಕೊಡಬೇಕಾಗಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಥಿಸಿಕೊಳ್ಳಬೇಕಿದೆ. ಅಲ್ಲದೆ ಈಗ ಬಹಿರಂಗ ಹೇಳಿಕೆ ನೀಡಿ ಆಗ್ರಹ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡದೇ ಇದ್ದರೂ,ಉತ್ತರ ಕೊಡದೇ ಇದ್ದರೂ ಯಾವ ಸಮಸ್ಯೆ ಕೂಡ ಇಲ್ಲ. ಒಂದು ವೇಳೆ ಉತ್ತರ ಕೊಟ್ಟರೂ ಅದಕ್ಕೆ ಮಹತ್ವ ಇರುವುದಿಲ್ಲ. ಆದರೆ, ಸದನದಲ್ಲಿ ಸರ್ಕಾರ ನೀಡುವ ಉತ್ತರ ದಾಖಲೆಯಲ್ಲಿ ಉಳಿಯಲಿದೆ. ಹೀಗಾಗಿ ಅಧಿವೇಶನ ಕರೆದು ಎಡವಟ್ಟು ಮಾಡಿಕೊಳ್ಳುವುದು ಯಾಕೆ ಎನ್ನುವ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾರೆ.
ಸಾಮಾಜಿಕ ಅಂತರದ ನೆಪ : ವಿಧಾನಸಭೆ ವಿಶೇಷ ಅಧಿವೇಶನ ಕರೆಯಲೇಬೇಕು ಎಂದು ಕಾಂಗ್ರೆಸ್ ತೀವ್ರ ಒತ್ತಡ ಹೇರಲು ಮುಂದಾದರೆ ಸಾಮಾಜಿಕ ಅಂತರದ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಬಜೆಟ್ ಅಧಿವೇಶನ ನಡೆಯುವ ವೇಳೆಯಲ್ಲೇ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಾಮಾಜಿಕ ಅಂತರ ಪಾಲನೆ ಸಲುವಾಗಿಯೇ ಅಧಿವೇಶನ ಮೊಟಕು ಮಾಡಲಾಗಿತ್ತು. ಅದನ್ನೇ ಈಗ ಮತ್ತೆ ಪ್ರಸ್ತಾಪಿಸಿ ಅಧಿವೇಶನಕ್ಕೆ ನಿರಾಕರಿಸಲು ನಿರ್ಧರಿಸಲಾಗಿದೆ. ಉಭಯ ಸದನಗಳಲ್ಲಿಯೂ ಸಾಮಾಜಿಕ ಅಂತರ ಪಾಲಿಸಿಕೊಂಡು ಆಸನ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ.
ಸಭೆ, ಸಮಾರಂಭ, ಜನ ಸೇರುವುದನ್ನು ನಿರ್ಬಂಧ ಮಾಡಿರುವಾಗ ಕಲಾಪ ನಡೆಸಿದರೆ ಅದರ ಉಲ್ಲಂಘನೆಯೂ ಆಗಲಿದೆ. ಶೇ.50ಕ್ಕಿಂತ ಕಡಿಮೆ ಸಿಬ್ಬಂದಿ ಬಳಸಿ ಕೆಲಸ ಕಾರ್ಯ ನಡೆಸಲಾಗುತ್ತಿದೆ. ಹೀಗಿರುವಾಗ ಕಲಾಪ ನಡೆಸಿದರೆ ಇದರ ಉಲ್ಲಂಘನೆಯೂ ಆಗಲಿದೆ. ಹಾಗಾಗಿ ಯಾವ ಕಾರಣಕ್ಕೂ ಕೊರೊನಾ ಲಾಕ್‌ಡೌನ್ ವೇಳೆ ವಿಶೇಷ ಅಧಿವೇಶನ ಸಾಧ್ಯವಿಲ್ಲ ಎಂದು ಹೇಳಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.