ಬೆಂಗಳೂರು: ಬೆಂಗಳೂರಿನ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಯುವಿಸಿಇ ಅಧ್ಯಕ್ಷ ಬಿ. ಮುತ್ತುರಾಮನ್ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕಾಲಮಿತಿಯೊಳಗೆ ಜಾರಿಮಾಡಬಹುದಾದ ಉತ್ತಮ ವಿಚಾರಗಳನ್ನು ಹೊಂದಿದ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳನ್ನು ರೂಪಿಸಬೇಕು. ಸಾಧ್ಯವಿರುವೆಡೆಗಳಲ್ಲಿ ಅತ್ಯುತ್ತಮ ಸಂಸ್ಥೆಗಳೊಂದಿಗೆ ಸಹಯೋಗ ಏರ್ಪಡಿಸಿ ಯಶಸ್ವಿಗೊಳಿಸುವುದು ಬಹಳ ಮುಖ್ಯ. ಯುವಿಸಿಇ ಯಶಸ್ಸು ಇತರರಿಗೆ ಸ್ಪೂರ್ತಿಯಾಗಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರತಿ ಸಂಸ್ಥೆಗೂ ಸಮಿತಿ: ಕೆಐಟಿಗೆ ಆಯ್ಕೆಯಾಗಿರುವ ಪ್ರತಿ ಸಂಸ್ಥೆಗೂ ನಿರ್ದಿಷ್ಟ ಗುರಿಗಳುಳ್ಳ ಸಮಿತಿಯನ್ನು ರಚಿಸಬೇಕು. ಮೌಲ್ಯ ಹಾಗೂ ನೈತಿಕತೆಯ ಆಧಾರದ ಮೇಲೆ ಸಂಸ್ಥೆಗಳನ್ನು ಕಟ್ಟಬೇಕು. ಆಯಾ ಪ್ರದೇಶದಲ್ಲಿ ಈ ಸಂಸ್ಥೆಗಳು ದೂರಗಾಮಿ ಪರಿಣಾಮವನ್ನು ಉಂಟು ಮಾಡಬೇಕೆಂದು ತಿಳಿಸಿದರು.
ಬೆಂಗಳೂರಿನಲ್ಲಿ ಯೂನಿಕಾರ್ನ್ ಚಿಹ್ನೆ: ಬೆಂಗಳೂರು ದೇಶದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್ಅಪ್ ಮತ್ತು ಯೂನಿಕಾರ್ನ್‍ಗಳನ್ನು ಹೊಂದಿರುವ ನಗರವಾಗಿದ್ದು, ಅದನ್ನು ಪ್ರತಿಬಿಂಬಿಸಲು ಹಾಗೂ ಉತ್ತೇಜಿಸಲು ನಗರದ ಪ್ರಮುಖ ಸ್ಥಳ ಗುರುತಿಸಿ ಯೂನಿಕಾರ್ನ್ ಚಿಹ್ನೆಯನ್ನು ಸ್ಥಾಪಿಸಲು ಸೂಚಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಸಿ. ಎನ್ ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಉಪಸ್ಥಿತರಿದ್ದರು.
ಓದಿ: ಸಿಕ್ಕಿದ ಚಿನ್ನದ ಸರ ವಾಪಸ್ ಮಾಡಿ ಮದುವೆ ಸಂಭ್ರಮ ಹೆಚ್ಚಿಸಿದ ಮಹಾತಾಯಿ