ಬೆಂಗಳೂರು: ಅಗತ್ಯ ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್-19 ಲಸಿಕೆ ಹಾಕುವ ವ್ಯವಸ್ಥೆಯನ್ನು ತಕ್ಷಣವೇ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ನ್ಯಾಯ ಪೀಠವು ಈ ನಿರ್ದೇಶನ ನೀಡಿದೆ.
ವಿಕಲಚೇತನರು ಅಥವಾ ಅವರ ಆರೈಕೆ ಮಾಡುವವರಿಂದ ಎಸ್‌ಎಂಎಸ್, ಇಮೇಲ್ ಅಥವಾ ವಾಟ್ಸಾಪ್ ಮೂಲಕ ಲಸಿಕೆಗಾಗಿ ವಿನಂತಿಗಳನ್ನು ಸ್ವೀಕರಿಸಲು ಜಿಲ್ಲಾ ಅಂಗವೈಕಲ್ಯ ಅಧಿಕಾರಿಗೆ ನಿರ್ದೇಶಿಸಲು ರಾಜ್ಯವು ಕ್ರಮ ಕೈಗೊಳ್ಳಬಹುದು. ವ್ಯಾಕ್ಸಿನೇಷನ್ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ಕಾಯುವ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಅರ್ಹ ವಿಕಲಾಂಗ ವ್ಯಕ್ತಿಗಳಿಗೆ ಲಸಿಕೆ ನೀಡಲು ಪರಿಣಾಮಕಾರಿ ವ್ಯವಸ್ಥೆಗಳನ್ನು ಮಾಡಲು ರಾಜ್ಯ ಮುಂದಾಗಬೇಕು ಎಂದು ಕೋರ್ಟ್ ಹೇಳಿದೆ.
ಅಂಗವೈಕಲ್ಯದಿಂದಾಗಿ ಪ್ರಯಾಣಿಸಲು ಸಾಧ್ಯವಾಗದ ವ್ಯಕ್ತಿಗಳ ಪ್ರಕರಣಗಳಲ್ಲಿ ಮನೆ ಬಾಗಿಲಿಗೆ ಲಸಿಕೆ ನೀಡುವುದನ್ನು ರಾಜ್ಯವು ಪರಿಗಣಿಸಬೇಕಿದೆ. ಈ ನಿರ್ದೇಶನಗಳನ್ನು ಅನುಸರಿಸುವ ಯೋಜನೆಯನ್ನು ಸರ್ಕಾರವು ರೂಪಿಸಲು ಮುಂದಾಗಲಿ ಎಂದು ಕೋರ್ಟ್ ಸಲಹೆ ನೀಡಿದೆ.
ವಿಕಲಾಂಗ ವ್ಯಕ್ತಿಗಳಿಗೆ ಆದ್ಯತೆಯ ಆಧಾರದ ಮೇಲೆ ಕೋವಿಡ್ -19 ಲಸಿಕೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಅರ್ಹ ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಕೋವಿಡ್-19 ಲಸಿಕೆ ನೀಡುವ ಬಗ್ಗೆ ಪರಿಗಣಿಸುವಾಗ, ಅಂತಹ ವ್ಯಕ್ತಿಗಳ ಆರೈಕೆ ಮಾಡುವವರಿಗೆ ಸಹ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಬೇಕು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇದರ ಮುಂದಿನ ವಿಚಾರಣೆಯನ್ನು ಮೇ 12ಕ್ಕೆ ನಿಗದಪಡಿಸಿದೆ. ಇದಕ್ಕೆ ತನ್ನ ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.