ಬೆಂಗಳೂರು: "ಬ್ರಾಹ್ಮಣ ಮುಖ್ಯಮಂತ್ರಿ ಹೇಳಿಕೆ ಕುರಿತು ಹೆಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಅವರ ದಿವಾಳಿತನವನ್ನು ತೋರಿಸುತ್ತಿದೆ. ಯಡಿಯೂರಪ್ಪ ಹಾಗೂ ನನ್ನ ಬಗೆಗಿನ ಅನುಕಂಪದಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಸುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ತಂತ್ರ ಫಲಿಸಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಸ್ಪಷ್ಟ ಬಹುಮತದೊಂದಿಗೆ ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ" ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಈ ದೃಷ್ಟಿಯಿಂದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲೂ ಮೋರ್ಚಾಗಳ ಸಮಾವೇಶ ಆಗಬೇಕು. ಅದಕ್ಕಾಗಿ ನನ್ನನ್ನು ಪಕ್ಷದಿಂದ ಸಂಚಾಲಕರಾಗಿ ಮಾಡಿದ್ದಾರೆ" ಎಂದರು.
"ಪ್ರತಿ ಜಿಲ್ಲೆಯಲ್ಲೂ ಎಲ್ಲ ಮೋರ್ಚಾಗಳ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಮಾವೇಶಗಳು ಯಶಸ್ವಿಯಾಗಬೇಕು. ಮೋರ್ಚಾ ಸಮಾವೇಶವನ್ನು ಪ್ರತಿ ಜಿಲ್ಲೆ, ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಮಾಡುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಸಮಾವೇಶ ಮಾಡುತ್ತೇವೆ. ಬರುವ ವಾರದಲ್ಲಿ ಪ್ರವಾಸದ ಬಗ್ಗೆ ತಿಳಿಸುತ್ತೇವೆ. ಯಾವ ಜಿಲ್ಲೆಯಿಂದ ಸಮಾವೇಶ ಶುರು ಮಾಡಬೇಕು, ಯಾವ ನಾಯಕರನ್ನು ಕರೆಸಬೇಕು ಎಂದು ಚರ್ಚೆ ಮಾಡಲಾಗುತ್ತಿದೆ" ಎಂದು ಹೇಳಿದರು.
"ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ವಿಷಯದ ಬಗ್ಗೆ ನೀಡಿದ ಹೇಳಿಕೆ ಮತ ಒಡೆಯಲು ಹೇಳಿದ್ದಾರೆ ಎಂದು ಅನಿಸೋದಿಲ್ಲ. ಅವರು ದಿವಾಳಿ ಆಗಿದ್ದಾರೆ. ಹೀಗಾಗಿ ಯಾವ ವಿಷಯ ಜನರ ಮುಂದಿಡಬೇಕು ಎಂದು ಗೊಂದಲದಲ್ಲಿದ್ದಾರೆ. ಕಾಂಗ್ರೆಸ್ನಲ್ಲೂ ಗೊಂದಲ ಇದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಏನೇ ಹೇಳಿದರೂ ಮತ್ತೆ ಜನ ಬಿಜೆಪಿಗೇ ಆಶೀರ್ವಾದ ಮಾಡುತ್ತಾರೆ. ಇನ್ನು ಸಿದ್ದರಾಮಯ್ಯ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾಪಿಸಿದ್ದಾರೆ. ನನ್ನ ಮತ್ತು ಯಡಿಯೂರಪ್ಪ ಬಗ್ಗೆ ಅನುಕಂಪದ ಮಾತನಾಡಿ ನಮ್ಮ ಪಕ್ಷದಲ್ಲಿ ಬೆಂಕಿ ಹಚ್ಚಬಹುದು ಅಂದುಕೊಂಡಿದ್ದಾರೆ. ಇದು ಯಾವತ್ತಿಗೂ ಸಾಧ್ಯವಾಗುವುದಿಲ್ಲ" ಎಂದರು.
"ಕೇಂದ್ರ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಮೋರ್ಚಾಗಳ ಸಮಾವೇಶ ಮಾಡ್ತಿರೋ ಉದ್ದೇಶವೇ ಕೇಂದ್ರ ರಾಜ್ಯಕ್ಕೆ ಕೊಟ್ಟಿರೋ ಅನುದಾನ ಏನು ಅಂತ ಹೇಳುವುದಕ್ಕೆ, ಚುನಾವಣೆ ಬಂದಾಗ ಈ ರೀತಿ ಹೇಳಿಕೆ ಬರುತ್ತವೆ. ನಾವು ಮಾಡಿರುವ ಕೆಲಸದ ಮೂಲಕ ಉತ್ತರ ಕೊಡುತ್ತೇವೆ" ಎಂದು ತಿಳಿಸಿದರು.
ಬಿಜೆಪಿ ವರಿಷ್ಠರಿಂದ ಪದೇ ಪದೇ ರಾಜ್ಯಾಗಮನಕ್ಕೆ ಸಿದ್ದರಾಮಯ್ಯ ಟೀಕೆ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, "ರಾಜ್ಯದಲ್ಲಿ ಬಿಜೆಪಿ ನಾಯಕರು ಯಾರೂ ಇಲ್ವಾ ಎಂದು ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿರುವ ರಾಷ್ಟ್ರೀಯ ನಾಯಕರ ಹಣೆಬರಹ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ. ಅವರ ನಾಯಕರಿಗೆ ಅಡ್ರೆಸ್ ಇಲ್ಲದಂತಾಗಿದೆ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ವಿಶ್ವ ನಾಯಕರು, ಇಡೀ ರಾಜ್ಯದಲ್ಲಿ ನಮ್ಮ ರಾಷ್ಟ್ರೀಯ ನಾಯಕರ ಪ್ರಭಾವ ಇದೆ. ಈ ಪ್ರಭಾವ ಬಳಸಿಕೊಂಡು ನಾವು ಚುನಾವಣೆ ಎದುರಿಸುತ್ತೇವೆ. ಇದರಲ್ಲಿ ನಾವು ಯಶಸ್ವಿ ಆಗುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಮೋದಿ ಸರ್ಕಾರದ ವಿರುದ್ಧ ಹೆಚ್ಡಿಕೆ ಟೀಕೆ