ಬೆಂಗಳೂರು: ಮೂರು ಕ್ಷೇತ್ರಗಳ ಉಪಚುನಾವಣೆ ಗೆಲುವು ಕಾಂಗ್ರೆಸ್ ಪಕ್ಷದ ನಾಯಕರಿಗೆ ನಿಜಕ್ಕೂ ಪ್ರತಿಷ್ಠೆಯ, ಸವಾಲಿನ ಹಾಗೂ ಅತ್ಯಂತ ತುರ್ತು ವಿಚಾರವಾಗಿ ಪರಿಣಮಿಸಿದೆ.
ಇತ್ತೀಚಿನ ದಿನಗಳಲ್ಲಿ ನಡೆದ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳೂ ಸೇರಿದಂತೆ ಅನೇಕ ಬಾರಿ ಕಾಂಗ್ರೆಸ್ಗೆ ಏಳಿಗಿಂತ ಬೀಳೇ ಹೆಚ್ಚಾಗಿದೆ. ಒಂದು ಗೆಲುವು ಸದ್ಯ ಪಕ್ಷದ ಅಸ್ಥಿತ್ವ ವ್ಯಕ್ತಪಡಿಸಲಿಕ್ಕಾದರೂ ಸಿಗಬೇಕಿದೆ. ತಾನೇ ಕಳೆದುಕೊಂಡ ಎರಡು ವಿಧಾನಸಭೆ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆಯಲ್ಲಿ ಒಂದರಲ್ಲಿ ಪಕ್ಷಕ್ಕೆ ಅನುಕಂಪದ ಅಲೆ ಸಹ ಇದೆ. ಅದರ ಲಾಭವನ್ನು ಕಾಂಗ್ರೆಸ್ ನಾಯಕರು ಎಷ್ಟರ ಮಟ್ಟಿಗೆ ಪಡೆಯುತ್ತಾರೆ ಎನ್ನುವುದೇ ಈಗಿರುವ ದೊಡ್ಡ ಪ್ರಶ್ನೆಯಾಗಿದೆ.
2023ರಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟವರು ಸಾಕಷ್ಟು ಮಂದಿ ಇದ್ದಾರೆ. ಇವರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರತಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯಗೆ ಮತ್ತೆ ಸಿಎಂ ಆಗುವ ಆಸೆ ಇದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಸಿಎಂ ಗಾದಿ ಏರುವ ಆಸೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಇದೆ. ಈ ಹಿನ್ನೆಲೆ ಇಬ್ಬರೂ ನಾಯಕರಿಗೂ ಈ ಚುನಾವಣೆ ಗೆಲುವು ಒಂದೊಂದು ರೀತಿ ಲಾಭ ತಂದುಕೊಡಲಿದೆ. ಅದೇ ಸೋಲುಂಟಾದರೆ ಕೊಂಚ ಮಟ್ಟಿನ ಹಿನ್ನಡೆಯೂ ಆಗಲಿದೆ.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಚುನಾವಣೆ ಗೆಲುವು ಅಥವಾ ಸೋಲು ಈ ಇಬ್ಬರು ನಾಯಕರ ಮೇಲೆ ಎಂತಹ ಪರಿಣಾಮ ಬೀರಲಿದೆ ಎನ್ನುವ ಕುತೂಹಲ ಮೂಡುವುದು ಸಹಜ. ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ ಎನ್ನುವ ಮಾಹಿತಿಯನ್ನೂ ಮನಸ್ಸು ನಿರೀಕ್ಷಿಸದೇ ಇರದು.
ಸಿದ್ದರಾಮಯ್ಯಗೆ ಲಾಭವೋ? ನಷ್ಟವೋ?: ಈ ಉಪಚುನಾವಣೆ ಗೆಲುವು ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಾಮುಖ್ಯವಾಗಿದೆ. ಪಕ್ಷದ ಶಾಸಕಾಂಗ ನಾಯಕರಾಗಿ ಸಿದ್ದರಾಮಯ್ಯಗೆ ಅತ್ಯಂತ ಮಹತ್ವದ ಚುನಾವಣೆ ಇದಾಗಿದೆ. ಈ ಚುನಾವಣೆ ಫಲಿತಾಂಶ ಧನಾತ್ಮಕವಾಗಿ ಲಭಿಸಿದರೆ ಲಾಭ, ಋಣಾತ್ಮಕವಾಗಿ ಲಭಿಸಿದರೆ ನಷ್ಟವೇನೂ ಇಲ್ಲ ಎನ್ನುವ ಸ್ಥಿತಿ ಸಿದ್ದರಾಮಯ್ಯ ಅವರದ್ದು.
ಡಿಕೆಶಿಗೆ ಲಾಭವೋ? ನಷ್ಟವೋ?: ಕೆಪಿಸಿಸಿ ಅಧ್ಯಕ್ಷರಾಗಿ, ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ, ಪಕ್ಷ ಮುನ್ನಡೆಸುವ ಹೊಣೆಗಾರಿಕೆ ದೊಡ್ಡದಿರುವ ಹಿನ್ನೆಲೆ ಡಿ.ಕೆ.ಶಿವಕುಮಾರ್ ಪಾಲಿಗೆ ಈ ಉಪಚುನಾವಣೆ ಗೆಲುವು ಅತ್ಯಂತ ಪ್ರತಿಷ್ಠೆಯದ್ದಾಗಿದೆ. ಸೋತರೆ ಸ್ಥಾನ ಕಳೆದುಕೊಳ್ಳುವ ಆತಂಕ ಇಲ್ಲವಾದರೂ ಸತತ ಸೋಲಿಗೆ ಪಕ್ಷದ ಹೈಕಮಾಂಡ್ಗೆ ಉತ್ತರ ಕೊಡುವುದು ಕಷ್ಟವಾಗಲಿದೆ. ಅಲ್ಲದೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡು ವರ್ಷ ಕಳೆದಿದೆ. ಅಧಿಕೃತವಾಗಿ ಪದಗ್ರಹಣ ಮಾಡಿದ ನಂತರ ಸಹ ಇನ್ನೂ ಅವರಿಗೆ ಗೆಲುವು ದಕ್ಕಿಲ್ಲ. ಅಧ್ಯಕ್ಷರಾಗಿ ಪಕ್ಷ ಮುನ್ನಡೆಸುತ್ತಿರುವ ಅವರಿಗೆ ಮೊದಲ ಗೆಲುವಿನ ಹಸಿವು ಹಾಗೆಯೇ ಉಳಿದಿದೆ. ಪಕ್ಷದ ಸಾರಥ್ಯ ವಹಿಸಿ ಮುಂದೆ ಸಿಎಂ ಆಗುವ ಕನಸು ಹೊತ್ತಿರುವ ಶಿವಕುಮಾರ್ಗೆ ಈ ಉಪಚುನಾವಣೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಅಧ್ಯಕ್ಷರಾಗಿ ತಮ್ಮನ್ನು ತಾವು ಪರಿಚಯಿಸಿಕೊಳ್ಳಲು, ಶಕ್ತಿಶಾಲಿ ಎಂದು ಹೇಳಿಕೊಳ್ಳಲು ಉಪಚುನಾವಣೆ ಗೆಲುವು ಮಹತ್ವದ ಪಾತ್ರ ವಹಿಸಲಿದೆ. ಈ ಹಿನ್ನೆಲೆ ಚುನಾವಣೆ ಗೆಲುವು ಲಾಭ ತಂದುಕೊಟ್ಟರೆ, ಸೋಲು ಖಂಡಿತಾ ನಷ್ಟವನ್ನುಂಟು ಮಾಡಲಿದೆ. ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ಎದುರಾದರೂ ಅಚ್ಚರಿಯಿಲ್ಲ.
ಈಗಾಗಲೇ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರತ್ಯೇಕ ಪ್ರಚಾರ ನಡೆಸಿದ್ದರಿಂದಲೇ ಸೋಲಾಯಿತು ಎಂಬ ಮಾತು ಮತ್ತೆ ಕೇಳದಿರಲಿ ಎಂದು ರಾಜ್ಯ ನಾಯಕರೆಲ್ಲಾ ಒಟ್ಟಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಗೆಲುವು ಯಾರಿಗೆ ದಕ್ಕಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.