ಬೆಂಗಳೂರು: ಜೆಡಿಎಸ್‍ಗೆ ಈ ಉಪಚುನಾವಣೆ ಅಗ್ನಿ ಪರೀಕ್ಷೆ ಜೊತೆಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವೂ ಆಗಿದೆ. ತಮ್ಮದೇ ಆಗಿದ್ದ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಜೆಡಿಎಸ್‍ಗೆ ರಾಜರಾಜೇಶ್ವರಿ ನಗರದಲ್ಲೂ ದೊಡ್ಡ ಸವಾಲು ಎದುರಾಗಿದೆ.
ಕ್ಷೇತ್ರ ಗೆಲ್ಲುವುದಕ್ಕಿಂತ ಎರಡು ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವ ಆಪರೇಷನ್ ತಡೆಯುವುದೇ ಜೆಡಿಎಸ್‍ಗೆ ದೊಡ್ಡ ಸವಾಲಾಗಿದೆ. ನಾಯಕರು ಹೋದರೂ ಕಾರ್ಯಕರ್ತರಿದ್ದಾರೆ. ಯಾರೂ ಬೇಕಾದರೂ ಹೋಗಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರಾದರೂ ವಾಸ್ತವ ಪರಿಸ್ಥಿತಿಯಲ್ಲಿ ಸಂಘಟನೆಯನ್ನು ಉಳಿಸಿಕೊಳ್ಳಲು ಅವರೂ ಸಹ ಪ್ರಯತ್ನ ನಡೆಸಿದ್ದಾರೆ. ಮುಖಂಡರ ವಲಸೆಯಿಂದ ಗೊಂದಲಕ್ಕೆ ಸಿಲುಕಿರುವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಉಳಿಸಿಕೊಳ್ಳುವ ಸಂದಿಗ್ಧ ಸ್ಥಿತಿ ಎದುರಾಗಿದೆ.
ಟಿಕೆಟ್ ಹಂಚಿಕೆ ನಂತರ ಸ್ವತಃ ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ಘಟಕಾಧ್ಯಕ್ಷರೇ ಪಕ್ಷ ತೊರೆದು ಕಾಂಗ್ರೆಸ್ ಸಖ್ಯ ಬೆಳೆಸಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರನ್ನು ಗುಳೆ ಎಬ್ಬಿಸಿದ್ದಾರೆ. ಅತ್ತ ಬಿಜೆಪಿ ಕಡೆಗೂ ವಾಲದೆ ಇತ್ತ ಕಾಂಗ್ರೆಸ್ ಸಹವಾಸಕ್ಕೂ ಹೋಗದೇ ಸ್ವತಂತ್ರವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಈಗ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಮೈತ್ರಿ ಸರ್ಕಾರ ಪತನವಾದ ನಂತರ ಅಧಿಕಾರ ಕಳೆದುಕೊಂಡ ಹೆಚ್ಡಿಕೆ ಇದೀಗ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಿರುವುದನ್ನು ಗಮನಿಸಿದರೆ ಉಪಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭೀತಿ ಅವರಿಗೆ ಕಾಡುತ್ತಿದೆಯೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಕಾರಣವೂ ಇದೆ. ಶಿರಾ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರಗಳ ಹಲವಾರು ಜೆಡಿಎಸ್ ಮುಖಂಡರು ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ಜೆಡಿಎಸ್‍ಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ.
ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲೇಬೇಕಾಗಿದೆ ಎಂಬ ಮಾತುಗಳು ಸಹ ಜೆಡಿಎಸ್ ವರಿಷ್ಠರಿಂದಲೇ ಬಂದಿದೆ. ಈ ಕ್ಷೇತ್ರದ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‍ಗೆ ಸೆಳೆಯುತ್ತ, ತಾವೇ ಒಕ್ಕಲಿಗ ನಾಯಕರು ಎಂದು ಬಿಂಬಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಹೇಳದೆ ಕುಮಾರಸ್ವಾಮಿ ಪ್ರತಿದಿನ ಆಪಾದನೆ ಮಾಡುತ್ತಿದ್ದಾರೆ. ಸಮುದಾಯ ಕಷ್ಟಕ್ಕೆ ಸಿಲುಕಿದ್ದ ಸನ್ನಿವೇಶದಲ್ಲಿ ಏನು ಮಾಡಿದ್ದಾರೆ ಎಂದು ಕುಟುಕುತ್ತಿದ್ದಾರೆ. ಇಲ್ಲಿನ ಫಲಿತಾಂಶ ಇಬ್ಬರಿಗೂ ಪ್ರತಿಷ್ಠೆಯಾಗುವ ಜತೆಗೆ ಭವಿಷ್ಯದ ಲೆಕ್ಕಾಚಾರವೂ ಇದರ ಹಿಂದೆ ಇದೆ ಎಂದು ಹೇಳಲಾಗುತ್ತಿದೆ.
ತಮ್ಮ ಕೈಯಿಂದ ತಪ್ಪಿ ಹೋಗುತ್ತಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಡಿ.ಕೆ. ಶಿವಕುಮಾರ್ ಕೈವಶ ಮಾಡಿಕೊಳ್ಳುತ್ತಿದ್ದಾರೆ ಎಂಬ ಭಯ ಕುಮಾರಸ್ವಾಮಿ ಅವರಿಗೆ ಇದ್ದಂತೆ ತೋರುತ್ತಿದೆ. ಎಲ್ಲಿಯೂ ಅದನ್ನು ಹೇಳಿಕೊಳ್ಳದೇ ಚಾಣಾಕ್ಷತೆಯಿಂದ ಅದನ್ನೇ ಮಾಡುತ್ತಿರುವ ಶಿವಕುಮಾರ್, ತಮ್ಮ ಮುಂದಿನ ಹಾದಿಯನ್ನು ಸಲೀಸು ಮಾಡಿಕೊಳ್ಳುತ್ತಿದ್ದಾರೆ.
ಈ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಇನ್ನೂ ಎರಡೂ ವರ್ಷದ ಬಳಿಕ ನಡೆಯಬೇಕಾದ ವಿಧಾನಸಭೆ ಚುನಾವಣೆಗೆ ಇದೇನೂ ದಿಕ್ಸೂಚಿಯಾಗಲಾರದು. ಅಷ್ಟರೊಳಗೆ ಇನ್ನೂ ಏನೇನೂ ಬದಲಾವಣೆ ರಾಜ್ಯದಲ್ಲಿ ಆದರೂ ಆಶ್ಚರ್ಯವಿಲ್ಲ. ಕುಮಾರಸ್ವಾಮಿ ಅವರು ಸಹ ನಿನ್ನೆ ಇದೇ ಮಾತನ್ನು ಆರ್.ಆರ್. ನಗರದ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಪ್ರತಿ ಚುನಾವಣೆಯೂ ರಾಜಕಾರಣಿಗಳಿಗೆ ಮೆಟ್ಟಿಲು ಆಗಿರುವುದರಿಂದ ಅದನ್ನು ಹತ್ತುತ್ತೇವೊ ಅಥವಾ ಒಂದು ಹೆಜ್ಜೆ ಇಳಿಯುತ್ತೇವೊ ಎಂಬುದಷ್ಟೇ ಮುಖ್ಯ. ಈ ಕಾರಣಕ್ಕಾಗಿಯೇ ಒಕ್ಕಲಿಗ ನಾಯಕತ್ವಕ್ಕಾಗಿ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಜಿದ್ದಿಗೆ ಬಿದ್ದಿರುವುದು ಸತ್ಯ.
ಆರ್.ಆರ್.ನಗರ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸ್ವತಃ ಅಖಾಡಕ್ಕೆ ಇಳಿದು ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಪಕ್ಷದ ಶಾಸಕರು, ಮುಖಂಡರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುತ್ತಿರುವ ಜೆಡಿಎಸ್, ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಅಧಿಕಾರಾವಧಿಯಲ್ಲಿ ಮಾಡಿದ ಕೆಲಸಗಳನ್ನು ತಿಳಿಸುವ ಮೂಲಕ ಮತ ಪ್ರಚಾರ ನಡೆಸಲಾಗುತ್ತಿದೆ.
ತಂತ್ರಗಾರಿಕೆ: ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ನಂತರ ಬಿಜೆಪಿಯಲ್ಲೂ ಆಂತರಿಕ ಭಿನ್ನಮತ ಹೊಗೆಯಾಡುತ್ತಿದ್ದು, ಇದರ ಲಾಭ ಪಡೆಯಲು ಜೆಡಿಎಸ್ ತಂತ್ರಗಾರಿಕೆ ರೂಪಿಸುತ್ತಿದೆ. ಅದೇ ರೀತಿ ಕಾಂಗ್ರೆಸ್ನಲ್ಲಿರುವ ಅಸಮಾಧಾನವನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಜೆಡಿಎಸ್ ಯತ್ನಿಸುತ್ತಿದೆ ಎನ್ನಲಾಗ್ತಿದೆ.