ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ನವೆಂಬರ್ 11 ರಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾದ ದಿನದಿಂದಲೇ ನೀತಿ ಸಂಹಿತೆ ಜಾರಿಯಾಗದೇ ಇರುವುದಕ್ಕೆ ರಾಜಕೀಯ ಪಕ್ಷಗಳು ಕೋರ್ಟ್ ಮೆಟ್ಟಿಲೇರಿವೆ. ಹಾಗಾಗಿ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ. ಆದರೆ, ಕೇಂದ್ರ ಚುನಾವಣಾ ಆಯೋಗ ಈಗ ಪ್ರಕಟಿಸಿರುವ ವೇಳಾ ಪಟ್ಟಿಯಲ್ಲಿ ಯಾವ ಬದಲಾವಣೆ ಇಲ್ಲ ನವೆಂಬರ್ 11ರಿಂದಲೇ ನೀತಿ ಸಂಹಿತೆ ಜಾರಿಯಾಗುತ್ತದೆ ಎಂದರು.
ಸೆಪ್ಟೆಂಬರ್ 1ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಚಾಲ್ತಿಯಲ್ಲಿದೆ. ನವೆಂಬರ್ 18ರ ವರಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತದೆ. ರಾಜ್ಯದ ಒಟ್ಟು 5,10,69,354 ಮತದಾರರ ಪೈಕಿ 1,88,06,865 ಮತದಾರರು ಅಂದರೆ ಶೇಕಡಾ 37ರಷ್ಟು ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 81ರಷ್ಟು ಮತದಾರರು ಪರಿಷ್ಕರಣೆ ಮಾಡಿದ್ದರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.6ರಷ್ಟು ಮತದಾರರು ಮಾತ್ರ ಮತದಾರರ ಪಟ್ಟಿ ಪರಿಶೀಲನೆ ಮಾಡಿಕೊಂಡಿದ್ದಾರೆ. ಉಳಿದವರು ಕೂಡ ಪಟ್ಟಿ ಪರಿಶೀಲನೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮತದಾರರು ವೋಟರ್ಸ್ ಹೆಲ್ಪ್ ಲೈನ್ ಮೊಬೈಲ್ ಆಪ್, NVSPಪೋರ್ಟಲ್ http://www.nvsp.in, ಸಾಮಾನ್ಯ ಸೇವಾ ಕೇಂದ್ರಗಳು, ಇಆರ್ಒ ಕಚೇರಿಗಳ ಮೂಲಕ ಮತದಾರರ ಪಟ್ಟಿ ಪರಿಶೀಲನೆ ಮಾಡಬಹುದು. ವಿಕಲಾಂಗ ಮತದಾರರಿಗೆ ಪ್ರತ್ಯೇಕ ವೋಟರ್ ಹೆಲ್ಪಲೈನ್ 1950 ಸ್ಥಾಪಿಸಲಾಗಿದೆ ಎಂದರು.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ, ಮತದಾರರ ಪಟ್ಟಿ ಪರಿಶೀಲನೆ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿಯೇ ಮತದಾರರ ಪಟ್ಟಿ ಪರಿಶೀಲನೆ ಅವಧಿಯನ್ನು ನವೆಂಬರ್ 18ರ ವರಗೆ ವಿಸ್ತರಿಸಲಾಗಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಿಸದಿದ್ದರೆ ಆಯೋಗದ ಕಣ್ಣು: ಪ್ರತಿಯೊಬ್ಬ ಮತದಾರ ಕೂಡ ಮತದಾರರ ಬೃಹತ್ ಪರಿಶೀಲನಾ ಆಂದೋಲನದಲ್ಲಿ ಪಾಲ್ಗೊಳ್ಳಬೇಕು ತಮ್ಮ ಹೆಸರನ್ನು ಪರಿಶೀಲನೆ ಮಾಡಿಸಿಕೊಳ್ಳಬೇಕು ಹೆಸರು ಪರಿಶೀಲನೆ ಮಾಡಿಸಿಕೊಳ್ಳದೇ ಇದ್ದಲ್ಲಿ ಅವರ ಹೆಸರನ್ನು ಮಾತದಾರರ ಪಟ್ಟಿಯಿಂದ ಕೈಬಿಡಲ್ಲ. ಆದರೆ, ಅಂತಹ ಮತದಾರರ ಹೆಸರನ್ನು ಆಯೋಗ ಅನುಮಾನಿಸಲಿದೆ ಎಂದರು.
ಇನ್ಮುಂದೆ ಕುಟುಂಬ ಸದಸ್ಯರ ಹೆಸರು ಒಂದೇ ಕಡೆ: ಕುಟುಂಬ ಸದಸ್ಯರ ಹೆಸರುಗಳು ಗಣಕೀಕೃತ ವ್ಯವಸ್ಥೆಯಲ್ಲಿ ನಿಗದಿತ ಮತದಾರರ ಸಂಖ್ಯೆ ದಾಟಿದಲ್ಲಿ ಮತ್ತೊಂದು ಮತಗಟ್ಟೆಗೆ ಸ್ವಯಂ ಚಾಲಿತವಾಗಿ ಸ್ಥಳಾಂತರವಾಗಲಿದೆ. ಆದರೆ, ಈಗ ಒಂದು ಕುಟುಂಬ ಎಂದು ಕುಟುಂಬ ಸದಸ್ಯರಲ್ಲಿ ಇಬ್ಬರು ಗುರುತು ಮಾಡಿದರೂ ಆ ಸದಸ್ಯರ ಹೆಸರು ಒಂದೇ ಮತಗಟ್ಟೆಯಲ್ಲಿ ಇರುವಂತೆ ಮಾಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದರು.