ಬೆಂಗಳೂರು: ರಾಜ್ಯ ವಿಧಾನಸಭೆ ಉಪಚುನಾವಣೆಗೆ ಘೋಷಣೆ ಮಾಡದೆ ಉಳಿಸಿಕೊಂಡಿದ್ದ ಒಂದು ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಫೈನಲ್ ಮಾಡಿದೆ.
ರಾಜ್ಯದ 15 ಕ್ಷೇತ್ರಗಳಿಗೆ ಡಿ.5ಕ್ಕೆ ನಡೆಯುವ ಮತದಾನಕ್ಕೆ ನ.19 ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದೆ. ವಾರದ ಹಿಂದೆ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಪಕ್ಷ ನಿನ್ನೆ ತಡರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡಿತ್ತು. ಇಂದು ಸಂಜೆ ಮೂರನೇ ಹಾಗೂ ಕಡೆಯ ಪಟ್ಟಿ ಬಿಡುಗಡೆ ಮಾಡಿದ್ದು, ಬಾಕಿ ಉಳಿದಿದ್ದ ಯಶವಂತಪುರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಅನಿರೀಕ್ಷಿತ ಆಯ್ಕೆ:
ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಗೆ ನಾಲ್ಕಾರು ಹೆಸರು ಕೇಳಿ ಬಂದಿದ್ದವು. ಆದರೆ ಪಿ. ನಾಗರಾಜ್ ಅಥವಾ ಪಾಳ್ಯ ನಾಗರಾಜ್ ಅಚ್ಚರಿಯಾಗಿ ಆಯ್ಕೆ ಆಗಿದ್ದಾರೆ. ನಾಗರಾಜ್ ಅವರು ಮಾಜಿ ಸಚಿವ ಹಾಗೂ ಬೆಂಗಳೂರಿನ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಆಪ್ತ ಎನ್ನಲಾಗಿದ್ದು, ಇಂದು ಸಂಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇವರ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆದೇಶ ಹೊರ ಬೀಳುತ್ತಿದ್ದಂತೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿವಾಸಕ್ಕೆ ಭೇಟಿ ಕೊಟ್ಟ ನಾಗರಾಜ್ ಅವರು 'ಬಿ' ಫಾರಂ ಸ್ವೀಕರಿಸಿ ತೆರಳಿದ್ದಾರೆ. ನಾಳೆ ಮಧ್ಯಾಹ್ನ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಅಂತಿಮವಾಗಿ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು:
ಅಥಣಿ - ಗಜಾನನ ಬಾಲಚಂದ್ರ ಮಂಗ್ಸೂಳಿ,
ಕಾಗವಾಡ - ಭರಮಗೌಡ ಆಲಂಗೋಡ ಕಾಗೆ (ರಾಜು ಕಾಗೆ),
ಗೋಕಾಕ್ - ಲಖನ್ ಜಾರಕಿಹೊಳಿ,
ಬಳ್ಳಾರಿಯ ವಿಜಯನಗರ - ವೆಂಕಟರಾವ್ ಘೋರ್ಪಡೆ,
ಶಿವಾಜಿನಗರ - ರಿಜ್ವಾನ್ ಅರ್ಷದ್,
ಕೃಷ್ಣರಾಜಪೇಟೆ - ಕೆಬಿ ಚಂದ್ರಶೇಖರ್
ಮಹಾಲಕ್ಷ್ಮಿಲೇಔಟ್ - ಎಂ. ಶಿವರಾಜು,
ಚಿಕ್ಕಬಳ್ಳಾಪುರ - ಆಂಜಿನಪ್ಪ,
ಹುಣಸೂರು - ಹೆಚ್‌ಪಿ ಮಂಜುನಾಥ್,
ಹಿರೇಕೆರೂರು - ಬಿಹೆಚ್ ಬನ್ನಿಕೋಡ್,
ರಾಣೆಬೆನ್ನೂರು - ಕೆ ಬಿ ಕೋಳಿವಾಡ,
ಯಲ್ಲಾಪುರ - ಭೀಮಣ್ಣ ನಾಯಕ್,
ಹೊಸಕೋಟೆ - ಪದ್ಮಾವತಿ ಸುರೇಶ್
ಕೆಆರ್ ಪುರ - ಎಂ. ನಾರಾಯಣಸ್ವಾಮಿ
ಯಶವಂತಪುರ - ಪಿ. ನಾಗರಾಜ್