ಬೆಂಗಳೂರು: ಉದ್ಯಮಿಯೊಬ್ಬರಿಗೆ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿರುವ ಆರೋಪ ಸಂಬಂಧ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದಿಂದ ಬಂದ ಅರ್ಧ ಗಂಟೆಯಲ್ಲೇ ಚೈತ್ರಾ ಮೂರ್ಛೆ ಹೋಗಿದ್ದಾರೆ. ಕೂಡಲೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಚೈತ್ರಾ ಬೆಳಗಿನ ಟಿಫಿನ್ ಕೂಡ ಮಾಡಿರಲಿಲ್ಲ ಎಂಬ ಮಾಹಿತಿ ಇದೆ.
ಏನಿದು ಪ್ರಕರಣ: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧಿತರಾದ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಐದು ಮಂದಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಕರಣ ಪ್ರಮುಖ ಆರೋಪಿತೆಯಾಗಿರುವ ಚೈತ್ರಾ ಕುಂದಾಪುರ, ರಮೇಶ್, ದೇವರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿ ಸೆಪ್ಟೆಂಬರ್ 14ರಂದು ಬೆಂಗಳೂರಿನ ಸಿಸಿಬಿ ಕಚೇರಿಗೆ ಅಧಿಕಾರಿಗಳು ಕರೆತಂದಿದ್ದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು. ಬಳಿಕ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಬೇಕು ಎಂದು ಸಿಸಿಬಿ ಪರ ವಕೀಲರು ಮನವಿ ಮಾಡಿದ್ದರು. ಮನವಿಗೆ ಪುರಸ್ಕರಿಸಿದ ನ್ಯಾಯಾಲಯವು ಸೆ.23ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಗುರುವಾರ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಯತ್ತ ವಿಚಾರಣೆಗೆ ಕರೆದೊಯ್ಯುವಾಗ ಮಾತನಾಡುತ್ತ ತೆರಳಿದ್ದ ಚೈತ್ರಾ, ಸ್ವಾಮೀಜಿ ಬಂಧನದ ಬಳಿಕ ಎಲ್ಲಾ ಸತ್ಯ ಹೊರಬರಲಿದೆ. ದೊಡ್ಡವರ ಹೆಸರು ಕೂಡ ಬಹಿರಂಗ ಆಗುತ್ತದೆ ಎಂದಿದ್ದರು. ಅಲ್ಲದೆ, ಇಂದಿರಾ ಕ್ಯಾಂಟೀನ್ ಬಿಲ್ ಬಾಕಿಯಿರುವುದರಿಮದ ಈ ರೀತಿ ಷಡ್ಯಂತ್ರ ಮಾಡಲಾಗಿದೆ ಎಂದೂ ಕೂಡ ಹೇಳಿದ್ದರು.
ಸ್ವಾಮೀಜಿ ಅಭಿನವ ಹಾಲಶ್ರೀಗಾಗಿ ಶೋಧ: ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಜಯನಗರದವ ಹಾಲಶ್ರೀ ಮಠದ ಅಭಿನವ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಜ್ಞಾತ ವಾಸದಲ್ಲಿದ್ದಾರೆ. ಪತ್ತೆಗಾಗಿ ಸಿಸಿಬಿ ಶೋಧ ಕಾರ್ಯ ಚುರುಕುಗೊಂಡಿದೆ.
ಓದಿ: ಏಕಾಏಕಿ ಇಂದಿರಾ ಕ್ಯಾಂಟೀನ್ ಬಿಲ್ ಬಗ್ಗೆ ಚೈತ್ರಾ ಕುಂದಾಪುರ ಹೇಳಿದ್ದೇಕೆ?