ಬೆಂಗಳೂರು: ರಾಜ್ಯ ವಿಧಾನಮಂಡಲ ಉಭಯ ಸದನಗಳ ಬಜೆಟ್ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಪ್ರಕಟವಾಗಿದೆ.
15ನೇ ವಿಧಾನಸಭೆಯ 9ನೇ ಅಧಿವೇಶನದ ಮುಂದುವರಿದ ಉಪವೇಶನ ಮಾರ್ಚ್ 4 ರಿಂದ 31ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ ಕೆ ವಿಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 4ಕ್ಕೆ ಆರಂಭವಾಗುವ ಅಧಿವೇಶನದಲ್ಲಿ ಮೊದಲ ಎರಡು ದಿನ ‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಚಾರದ ಮೇಲೆ ಸುದೀರ್ಘ ಚರ್ಚೆ ನಡೆಯಲಿದೆ. 6 ಮತ್ತು 7ರಂದು ಕಲಾಪಕ್ಕೆ ರಜೆ ಇರಲಿದೆ. ಮಾರ್ಚ್ 8 ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2021- 22 ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ.
ಮಾ.09, 10 ಮತ್ತು 12 ರಂದು ಸರ್ಕಾರಿ ಕಾರ್ಯ ಕಲಾಪಗಳು ನಡೆದರೆ, ಮಾ. 11, 13 ಮತ್ತು 14 ರಂದು ರಜೆ ಇರಲಿದೆ. ಮಾ.15 ರಿಂದ 19 ರವರೆಗೆ ಸರ್ಕಾರಿ ಕಾರ್ಯಕಲಾಪಗಳು ನಡೆಯಲಿವೆ. ಇದರಲ್ಲಿ ಮಾ.18 ರಂದು ಸರ್ಕಾರಿ ಕಾರ್ಯಕಲಾಪ ದ ಜೊತೆ ಖಾಸಗಿ ಕಾರ್ಯಕಲಾಪ ಕೂಡ ನಡೆಯಲಿದೆ.
ಮುಂದಿನ ಎರಡು ದಿನ ರಜೆ ಇರಲಿದ್ದು, ಕಲಾಪ ಮಾ.22 ರಿಂದ ಆರಂಭವಾಗಿ 26 ರವರೆಗೆ ನಡೆಯಲಿದೆ. ಮಾ.27, 28 ಕ್ಕೆ ರಜೆ ಇದ್ದು, ಮಾ.29 ರಿಂದ 31 ರವರೆಗೆ ಸರ್ಕಾರಿ ಕಾರ್ಯಕ್ರಮಗಳು ನಡೆಯಲಿವೆ.
ಸದ್ಯದ ಮಾಹಿತಿ ಪ್ರಕಾರ ಮಾರ್ಚ್ ತಿಂಗಳಿಗೆ ಬಜೆಟ್ ಅಧಿವೇಶನ ನಡೆಯಲಿದ್ದು, ವಿವಿಧ ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ಹಲವು ತಿದ್ದುಪಡಿ ವಿಧೇಯಕಗಳು ಅನುಮೋದನೆಗೆ ಬರಲಿವೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಗ್ವಾದಗಳಿಗೆ ಮತ್ತೊಮ್ಮೆ ವಿಧಾನಸಭೆ ಸಾಕ್ಷಿಯಾಗಲಿದೆ.