ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿಗೆ ಅಗತ್ಯ ಅನುದಾನ ಮೀಸಲು, ಕೇಂದ್ರ ಮಾದರಿಯ ವೇತನ ಭತ್ಯೆಗಳ ಮಂಜೂರು, ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ, ಖಾಲಿ ಹುದ್ದೆಗಳ ಭರ್ತಿ,ಆರೋಗ್ಯ ಸಂಜೀವಿನಿ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮಂಡಿಸಲಿರುವ ಬಜೆಟ್ನಲ್ಲಿ ರಾಜ್ಯ ಸರ್ಕಾರಿ ನೌಕರರು ನಿರೀಕ್ಷೆ ಇರಿಸಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು 7ನೇ ವೇತನ ಆಯೋಗ ಜಾರಿಗೆ ಬದ್ಧತೆ ವ್ಯಕ್ತಪಡಿಸಿದ್ದರಾದರೂ ಅಗತ್ಯ ಅನುದಾನವನ್ನ ಬಜೆಟ್ ನಲ್ಲಿ ಮೀಸಲಿಟ್ಟಿರಲಿಲ್ಲ. ಇದು ನೌಕರರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ಈಗ ಹೊಸದಾಗಿ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೇಲೆ ಸರ್ಕಾರಿ ನೌಕರರು ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ.
ರಾಷ್ಟ್ರದಲ್ಲಿರುವ ಒಟ್ಟು 28 ರಾಜ್ಯಗಳಲ್ಲಿ ಈಗಾಗಲೇ 25 ರಾಜ್ಯಗಳಲ್ಲಿ ಕೇಂದ್ರ ಮಾದರಿ ವೇತನ ಪದ್ಧತಿ ಜಾರಿಯಲ್ಲಿದೆ. ನೆರೆಯ ತೆಲಂಗಾಣ ರಾಜ್ಯವು ಇತ್ತೀಚೆಗೆಷ್ಟೇ ಹೊಸ ರಾಜ್ಯವಾಗಿ ರಚನೆಯಾಗಿದ್ದರೂ ತನ್ನ ನೌಕರರಿಗೆ ಕೇಂದ್ರ ಸರ್ಕಾರಿ ನೌಕರರ ಮಾದರಿಯ ವೇತನ ಭತ್ಯೆಗಳನ್ನು ಮಂಜೂರು ಮಾಡಿರುತ್ತಾರೆ. ನಿವೃತ್ತಿ ವಯಸ್ಸನ್ನು 62 ವರ್ಷಗಳಿಗೆ ಹೆಚ್ಚಿಸಿದೆ. ಎಲ್ಲ ಅಂಕಿ - ಅಂಶಗಳನ್ನು ಅವಲೋಕಿಸಿದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನ ಭತ್ಯೆಗಳನ್ನು ಮಂಜೂರು ಮಾಡಬೇಕು ಎನ್ನುವುದು ಸರ್ಕಾರಿ ನೌಕರರ ಒತ್ತಾಯವಾಗಿದ್ದು, ಈ ಒತ್ತಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಣಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕು.
ಏಳನೇ ವೇತನ ಆಯೋಗ ಜಾರಿಯ ಜೊತೆಗೆ ಈಗ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎನ್ನುವುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 2006ರಿಂದ ನೇಮಕವಾದ ಪಿಂಚಣಿಗೆ ಅರ್ಹತೆಯುಳ್ಳ ಎಲ್ಲ ಸರ್ಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆಯ ಅಡಿ ತರಲು ಸಹಾನುಭೂತಿಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿತು. ಅದರಂತೆ ಈಗ ನಡೆದುಕೊಳ್ಳಬೇಕು ಎನ್ನುವುದು ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಾಗಿದ್ದು, ಸಿದ್ದರಾಮಯ್ಯ ಸರ್ಕಾರ ಈ ಬಜೆಟ್ ನಲ್ಲಿ ಒಪಿಎಸ್ ಜಾರಿಗೆ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
2020-21ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಲಾಗಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಈಗಲಾದರೂ ಜಾರಿಯಾಗಲಿದೆಯಾ ಎನ್ನುವ ನಿರೀಕ್ಷೆ ಸರ್ಕಾರಿ ನೌಕರರದ್ದಾಗಿದೆ. ಮೂರು ವರ್ಷವಾದರೂ ಯೋಜನೆಯ ಲಾಭ ಪಡೆಯಲು ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ಕುಟುಂಬದ ಸದಸ್ಯರಿಗೆ ಸಾಧ್ಯವಾಗಿಲ್ಲ,ಈ ಯೋಜನೆಯ ಪರಿಷ್ಕೃತ ಕಾರ್ಯಸೂಚಿ ಕಳೆದ ಮಾರ್ಚ್ ನಲ್ಲಿ ಪ್ರಕಟವಾಗಿದ್ದು, ಈ ಬಜೆಟ್ ನಲ್ಲಿ ಜಾರಿ ಮಾಡಬೇಕು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರಬೇಕು ಎನ್ನುವ ಬಹುಕಾಲದ ಬೇಡಿಕೆ ಈಡೇರಿಕೆಯ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ಬಜೆಟ್ ಕಡೆ ಸರ್ಕಾರಿ ನೌಕರರು ನೋಡುತ್ತಿದ್ದಾರೆ, ಸಿದ್ದು ಜೋಳಿಗೆಯಲ್ಲಿ ಸರ್ಕಾರಿ ನೌಕರರ ಅಂತರ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದ 16ಎ ನಿಯಮಗಳಿಗೆ ತಿದ್ದುಪಡಿ ಮಾಡಿ ವರ್ಗಾವಣೆಗೆ ಅವಕಾಶ ಕಲ್ಪಿಸಲಿದೆ ಎನ್ನುವ ನಿರೀಕ್ಷೆ ಇದೆ.
ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.33 ರಷ್ಟು ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 43 ಇಲಾಖೆಗಳಿಗೆ 772025 ಹುದ್ದೆ ಮಂಜೂರಾಗಿದ್ದು, 516105 ಹುದ್ದೆ ಭರ್ತಿಯಾಗಿದ್ದು, 255920 ಹುದ್ದೆ ಖಾಲಿ ಹುದ್ದೆ, ಶೇ 33 ರಷ್ಟು ಹುದ್ದೆ ಖಾಲಿ ಇವೆ. ಈ ಹುದ್ದೆಗಳ ಭರ್ತಿ ಮಾಡುವ ಘೋಷಣೆ ಬಜೆಟ್ ನಲ್ಲಿ ಆಗಲಿದೆ ಎನ್ನುವ ನಿರೀಕ್ಷೆ ಸರ್ಕಾರಿ ನೌಕರರದ್ದಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಖಾಲಿ ಹುದ್ದೆ ಭರ್ತಿ ಭರವಸೆ ನೀಡಿರುವುದರಿಂದಾಗಿ ಈ ಬಜೆಟ್ ನಲ್ಲಿ ಹುದ್ದೆ ಭರ್ತಿ ಘೋಷಣೆ ನಿರೀಕ್ಷೆ ಇದೆ.
ಸಿಎಂ ಅನುದಾನ ಕಾಯ್ದಿರಿಸುವ ಭರವಸೆ ನೀಡಿದ್ದಾರೆ: ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ, ಏಳನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಬಜೆಟ್ ನಲ್ಲಿ ಅನುದಾನ ಕಾಯ್ದುಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿದ್ದು, ಸರ್ಕಾರಿ ನೌಕರರು ಒತ್ತಡಕ್ಕೆ ಸಿಲುಕಿರುವುದರ ಜೊತೆ ಅಪಾರ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದರೂ ಸಹ ತಮ್ಮ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಸರ್ಕಾರಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಲು ಖಾಲಿ ಹುದ್ದೆ ಭರ್ತಿ ಮಾಡಲು ಮನವಿ ಮಾಡಿದ್ದು, ಆರ್ಥಿಕ ಸ್ಥಿತಿಗತಿ ನೋಡಿ ಹಂತ ಹಂತವಾಗಿ ಖಾಲಿ ಹುದ್ದೆಯ ಭರವಸೆ ನೀಡಿದ್ದಾರೆ, ಬಜೆಟ್ ನಲ್ಲಿ ಇದರ ಪ್ರಸ್ತಾಪವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಸಧ್ಯ ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳ ಜಾರಿಯಿಂದಾಗಿ ಹೆಚ್ಚುವರಿಯಾಗಿ 60 ಸಾವಿರ ಕೋಟಿ ಹಣ ಹೊಂದಿಸಬೇಕಿದೆ, ಇದರ ನಡುವೆ ಸರ್ಕಾರಿ ನೌಕರರ ಯಾವೆಲ್ಲಾ ಬೇಡಿಕೆ ಈಡೇರಿಸಲಿದ್ದಾರೆ, ಎಷ್ಟು ಅನುದಾನ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂಓದಿ:ಕೋರ್ಟ್ನಿಂದ ಆದೇಶ ಬರುತ್ತಿದ್ದಂತೆ 13 ಸಾವಿರ ಪದವೀಧರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ ಭರವಸೆ