ಬೆಂಗಳೂರು: ರಾಜ್ಯ ಸರ್ಕಾರದ 2022-23ನೇ ಸಾಲಿನ ಬಜೆಟ್ನಲ್ಲಿ ಪೊಲೀಸ್ ಇಲಾಖೆಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ.
ಪೊಲೀಸ್ ಗೃಹ ಯೋಜನೆಯ 2ನೇ ಹಂತದಲ್ಲಿ ರಾಜ್ಯಾದ್ಯಂತ ಒಟ್ಟು 10,034 ವಸತಿಗೃಹಗಳನ್ನು 2,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಹಾಗೆಯೇ, ಅಗ್ನಿಶಾಮಕ ಸಿಬ್ಬಂದಿ ಅಪಾಯಕಾರಿ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಮನಗಂಡು ಸರ್ಕಾರ ಅವರಿಗೆ ವಿಮಾ ಮೊತ್ತವನ್ನು ಒಂದು ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಹೆಚ್ಚಿಸಲು ಉದ್ದೇಶಿಸಿದೆ.
ಕೆಎಸ್ಆರ್ಪಿ ಮಹಿಳಾ ತುಕಡಿ: ಬಂದೋಬಸ್ತ್ ಕರ್ತವ್ಯಕ್ಕೆ ಬರುವ ಅಧಿಕಾರಿ/ ಸಿಬ್ಬಂದಿಗಳಿಗೆ ತಂಗಲು ಅನುಕೂಲವಾಗುವಂತೆ ಬೆಳಗಾವಿಯಲ್ಲಿ ಬ್ಯಾರಕ್ ನಿರ್ಮಾಣ ಮಾಡಲಾಗುವುದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಪೊಲೀಸ್ ಇಲಾಖೆಯಲ್ಲಿ ಹೊಸ ಮೊಬಿಲಿಟಿ ಯೋಜನೆಯನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಐದು ಪೊಲೀಸ್ ಕಮೀಷನರೇಟ್‌ಗಳಲ್ಲಿ ತಲಾ 200 ಸರ್ವೇಲೆನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗುವುದು. ರಾಜ್ಯದಲ್ಲಿ ಒಂದು ನೂತನ ಕೆಎಸ್ಆರ್ ಪಿ ಮಹಿಳಾ ತುಕಡಿಯನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಚೊಚ್ಚಲ ಬಜೆಟ್ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥನೆ ಏನು?
ಹುಬ್ಬಳ್ಳಿ, ಬಳ್ಳಾರಿಯಲ್ಲಿ ಹೊಸ ಫೋರೆನ್ಸಿಕ್ ಲ್ಯಾಬ್: ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಆರಂಭಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಸಮಯವನ್ನು ಕಡಿತಗೊಳಿಸಿ ಪ್ರಯೋಗಾಲಯದ ಪರೀಕ್ಷೆಗಳ ವರದಿಗಳು ಶೀಘ್ರವಾಗಿ ತನಿಖಾಧಿಕಾರಿಗಳ ಕೈ ಸೇರುವಂತೆ ಮಾಡಲು ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸಲಾಗುವುದು.
ಬಂಧೀಕಾನೆ ಅಭಿವೃದ್ಧಿ ಮಂಡಳಿ ಸ್ಥಾಪನೆ: ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ದಾವಣಗೆರೆಯಲ್ಲಿ ಎಸ್ಡಿಆರ್ಎಫ್ ಕಂಪನಿಯನ್ನು ಸ್ಥಾಪಿಸಲಾಗುವುದು. ಬಂದಿಗಳ ಅಭ್ಯುದಯಕ್ಕಾಗಿ ಯೋಜನೆಯನ್ನು ರೂಪಿಸಲು ಅನುಕೂಲವಾಗುವಂತೆ ಬಂದೀಖಾನೆ ಅಭಿವೃದ್ಧಿ ಮಂಡಳಿ ಅಧಿನಿಯಮವನ್ನು ಜಾರಿಗೊಳಿಸಿ ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ. ಇದಲ್ಲದೆ ಕೈದಿಗಳಿಗೆ ವೃತ್ತಿ ತರಬೇತಿ ನೀಡಿ ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು.
ಬೆಂಗಳೂರು ಗ್ರಾಮಾಂತರದಲ್ಲಿ ಹೊಸ ಕಾರಾಗೃಹ: ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ತಡೆಯಲು ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳ ತಪಾಸಣೆ ಮಾಡಿ ಪತ್ತೆ ಹಚ್ಚಲು ಅತ್ಯಾಧುನಿಕ ಮಾದರಿಯ ಉಪಕರಣಗಳು ಮತ್ತು ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗುವುದು. ಕಾರಾಗೃಹಗಳಲ್ಲಿ ಬಂದಿಗಳ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ನಿರ್ಮಿಸಲಾಗುವುದು.