ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಒಟ್ಟು 5 ವರದಿಗಳನ್ನು ಸಲ್ಲಿಸಿದ್ದು, ಇದರಲ್ಲಿ 3630 ಇಲಾಖಾವಾರು ಶಿಫಾರಸುಗಳನ್ನು ಮಾಡಲಾಗಿದೆ. ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 2023-24ನೇ ಸಾಲಿನ ಕರ್ನಾಟಕ ಆಯವ್ಯಯ ಮಂಡಿಸಿದ ಆವರು, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ವಲಯದಲ್ಲಿ ಹಲವಾರು ಹೊಸ ಘೋಷಣೆಗಳನ್ನು ಮಾಡಿದರು.
ಜಾಪಪದಗಳು, ರಾಜ್ಯ ಸಾಮ್ರಾಜ್ಯಗಳು, ಗುರುಸ್ಥಾನಗಳು, ಧರ್ಮಗಳು, ಭಾಷೆ ವಿದ್ಯೆಗಳು, ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ ಮಾನವತೆ ನಿಂತಿಹುದು ಮಂಕುತಿಮ್ಮ ಎಂಬ ಡಿವಿಜಿಯವರ ಕಗ್ಗವನ್ನು ಉಲ್ಲೇಖಿಸಿ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳ ವಲಯದ ಬಜೆಟ್ ಮಂಡಿಸಿದರು ಸಿಎಂ ಬೊಮ್ಮಾಯಿ.
ತಲಾ ಆದಾಯ ಹೆಚ್ಚಳ: ರಾಜ್ಯದ ತಲಾ ಆದಾಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2.04 ಲಕ್ಷ ರೂಪಾಯಿಗಳಿಂದ 3.32 ಲಕ್ಷ ರೂಪಾಯಿಗಳಿಗೆ ಹೆಚ್ಚಾಗಿದೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ದೇಶದ ಸರಾಸರಿಗಿಂತ ಕಡಿಮೆಯಾಗಿದ್ದು, ಅಭಿವೃದ್ಧಿಯ ಬೆಳವಣಿಗೆ ದರ ಹೆಚ್ಚಾಗಿದೆ ಎಂದು ಸಿಎಂ ಹೇಳಿದರು.
ನಿರುದ್ಯೋಗಿ ಯುವಕರಿಗೆ ಬಂಪರ್: ನಿರುದ್ಯೋಗಿ ಯುವಕರಿಗೆ ಈ ಬಜೆಟ್ನಲ್ಲಿ ಆಶಾದಾಯಕ ಭರವಸೆಗಳನ್ನು ನೀಡಿರುವ ಬೊಮ್ಮಾಯಿ, ಈ ವರ್ಷ ರಾಜ್ಯದಲ್ಲಿ ಖಾಲಿ ಇರುವ 1 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳನ್ನು ಸಹ ಭರ್ತಿ ಮಾಡಲಾಗುವುದು. ಈ ಎಲ್ಲ ಹುದ್ದೆಗಳ ಆಯ್ಕೆ ಪ್ರಕ್ರಿಯೆಯನ್ನು 2023-24ನೇ ಸಾಲಿನಲ್ಲಿಯೇ ಪೂರ್ಣಗೊಳಿಸಿ ನೇಮಕಾತಿ ಆದೇಶಗಳನ್ನು ನೀಡುವ ನಿರ್ಧಾರ ಪ್ರಕಟಿಸಿದ್ದಾರೆ ಸಿಎಂ ಬೊಮ್ಮಾಯಿ.
ಉತ್ತರ ಕರ್ನಾಟಕಕ್ಕೆ ಆದ್ಯತೆ: ಉತ್ತರ ಕರ್ನಾಟಕ ಭಾಗಕ್ಕೆ ಈ ಬಾರಿ ಸರ್ಕಾರ ವಿಶೇಷ ಒತ್ತು ನೀಡಿದ್ದು, ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಘೋಷಣೆ ಮಾಡಲಾಗಿದೆ.
ಗುತ್ತಿಗೆ ಜಮೀನು ಕಾಯ್ದೆ ತಿದ್ದುಪಡಿ: ಸರ್ಕಾರಿ ಜಮೀನನ್ನು ದಶಕಗಳಿಂದ ಒತ್ತುವರಿ ಮಾಡಿಕೊಂಡು ಕಾಫಿ, ಟೀ ಮತ್ತು ಇನ್ನಿತರೆ ಪ್ಲಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು 30 ವರ್ಷಗಳ ಅವಧಿಗೆ ಗರಿಷ್ಠ 25 ಎಕರೆ ಮಿತಿಗೆ ಒಳಪಟ್ಟು ಗುತ್ತಿಗೆ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, 2023-24ನೇ ಸಾಲಿನಲ್ಲಿ ಈ ಕಾಯ್ದೆ ಜಾರಿಗೊಳಿಸಲು ನಿಯಮಗಳನ್ನು ರೂಪಿಸಲಾಗುವುದು.
ಗೋಮಾಳ ಜಮೀನು ಮಂಜೂರಾತಿಗೆ ಕ್ರಮ: ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿಯನ್ನು ರೂಪಿಸುವ ಸಲುವಾಗಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಅದರ ಶಿಫಾರಸಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಘೋಷಿಸಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿರುವ ಸುಮಾರು 4,292 ಎಕರೆ ಜಮೀನನ್ನು ಮಾರ್ಗಸೂಚಿ ಮೌಲ್ಯವನ್ನು ವಿಧಿಸಿ ಖಾಯಂ ಆಗಿ ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ಕಾಯ್ದೆಗೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸಾಗುವಳಿ ಸಕ್ರಮ ಕಾಲಾವಕಾಶ ವಿಸ್ತರಣೆ: ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮಗೊಳಿಸಲು ನಮೂನೆ-57 ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 30.05.2022 ರಿಂದ ಒಂದು ವರ್ಷದ ಅವಧಿಯವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
3 ಸಾವಿರ ಗ್ರಾಮ ಪೋಡಿಮುಕ್ತ : ರೈತರಿಗೆ ತುರ್ತಾಗಿ ಭೂಮಾಪನಾ ನಕ್ಷೆ ಬೇಕಾಗಿದ್ದಲ್ಲಿ ಸ್ವಾವಲಂಬಿ ಯೋಜನೆಯಡಿ ಸ್ವತಃ ನಕ್ಷೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು, 5 ಸಾವಿರಕ್ಕಿಂತ ಹೆಚ್ಚು ಜನ ಈಗಾಗಲೇ ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಪೋಡಿ ಮುಕ್ತ ಅಭಿಯಾನ ಯೋಜನೆಯನ್ನು ಗಣಕೀಕೃತಗೊಳಿಸಿ ಮೋಜಣಿ ಗಣಕ ವ್ಯವಸ್ಥೆಯಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಸಾಲಿನಲ್ಲಿ 3 ಸಾವಿರ ಗ್ರಾಮಗಳನ್ನು ಪೋಡಿಮುಕ್ತಗೊಳಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಗ್ರಾಮಸಹಾಯಕರ ವೇತನ ಹೆಚ್ಚಳ: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇವರ ಹುದ್ದೆಯನ್ನು ಜನಸೇವಕ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದು, ಇವರ ಮಾಸಿಕ ಗೌರವ ಧನವನ್ನು 13,000 ರೂ.ಗಳಿಂದ 14,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರ ಅಭಿವೃದ್ಧಿ ಮಾಡುವುದಾಗಿ ಸಿಎಂ ಹೇಳಿದರು.
ಇನಾಂ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸುವುದಾಗಿ ಸಿಎಂ ಹೇಳಿದ್ದಾರೆ. ಉಪನೋಂದಣಿ ಕಚೇರಿಗಳನ್ನು ಮಾದರಿ ಉಪನೋಂದಣಿ ಕಚೇರಿಗಳಾಗಿ ಮಾರ್ಪಾಡು ಮಾಡುವ ಯೋಜನೆಯೊಂದನ್ನು ಜಾರಿಗೆ ತರುವುದಾಗಿ ಸಿಎಂ ಹೇಳಿದ್ದಾರೆ. ಇದರಡಿ ಮೊದಲನೇ ಹಂತದಲ್ಲಿ ಪ್ರಸಕ್ತ ಸಾಲಿನಲ್ಲಿ 8 ಕಚೇರಿಗಳನ್ನು ಅಭಿವೃದ್ಧಿಪಡಿಸಲಾಗುವುದು.
ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಹಲವಾರು ಕ್ರಮ: ಪ್ರಸಕ್ತ ವರ್ಷ ಬೆಂಗಳೂರಿನಲ್ಲಿ ಒಂಬತ್ತು ಕಾನೂನು ಮತ್ತು ಸುವ್ಯವಸ್ಥೆ, ಐದು ಸಂಚಾರಿ, ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಹೊಸದಾಗಿ ಸ್ಥಾಪಿಸಲಾಗುವುದು. ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆ ಬಲಪಡಿಸಲು ವಿವಿಧ ಹಂತಗಳಲ್ಲಿ ಹೆಚ್ಚುವರಿಯಾಗಿ 2000 ಹುದ್ದೆ ಸೃಜಿಸಲಾಗುವುದು. ಪೊಲೀಸ್ ಗೃಹ - 2025 ಯೋಜನೆಯಡಿ ಮತ್ತೆ 450 ಕೋಟಿ ಅನುದಾನ. 3000 ವಸತಿ ಗೃಹ ನಿರ್ಮಾಣ ಕಾರ್ಯ ಈ ವರ್ಷ ಪೂರ್ಣ.
ರಾಜ್ಯದಲ್ಲಿ ಹೊಸ ವಿಧಿವಿಜ್ಞಾನ ಪ್ರಯೋಗಾಲಯ: ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗುವುದು. ಹಾಗೆಯೇ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಧಾರವಾಡದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಹೇಳಲಾಗಿದೆ. ಹಳೆಯ ಮತ್ತು ಅನುಪಯುಕ್ತ ವಾಹನಗಳನ್ನು ಹಂತ ಹಂತವಾಗಿ ಬದಲಾಯಿಸಿ ಹೊಸ ವಾಹನಗಳನ್ನು ಇಲಾಖೆಗೆ ಸೇರ್ಪಡೆಗೊಳಿಸಲು ಪ್ರಸಕ್ತ ಸಾಲಿನಲ್ಲಿ 50 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.
ಗೃಹರಕ್ಷಕರಿಗೆ ಸಿಹಿಸುದ್ದಿ: ರಾಜ್ಯದಲ್ಲಿ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಸಹಾಯಕ ಪಡೆಯಾಗಿ ಕೆಲಸ ಮಾಡುತ್ತಿರುವ ಗೃಹರಕ್ಷಕರಿಗೆ ಈ ಬಾರಿ ಬಜೆಟ್ನಲ್ಲಿ ಸಿಹಿ ಸುದ್ದಿ ಬಂದಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಸಾವಿರ ನೋಂದಾಯಿತ ಗೃಹರಕ್ಷಕರಿಗೆ ಪ್ರಸ್ತುತ ಪ್ರತಿ ದಿನಕ್ಕೆ ನೀಡುತ್ತಿರುವ ಕರ್ತವ್ಯ ಭತ್ಯೆಯನ್ನು 100 ರೂಪಾಯಿ ಹೆಚ್ಚಿಸಲಾಗಿದೆ.
ಸೈಬರ್ ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿದ್ದು, ಈ ವ್ಯವಸ್ಥೆಯ ಸುರಕ್ಷತೆಯೂ ಆದ್ಯತೆಯ ವಿಷಯವಾಗಿದೆ ಎಂದು ಸಿಎಂ ಹೇಳಿದ್ದಾರೆ. ಇದಕ್ಕಾಗಿ ಸರ್ಕಾರಿ ವೆಬ್ಸೈಟ್ಗಳು ಆನ್ಲೈನ್ ಸೇವೆಗಳು ಮತ್ತು ದತ್ತಾಂಶಗಳ ಸುರಕ್ಷತೆಗಾಗಿ ಸೈಬರ್ ತಜ್ಞರು ಮತ್ತು ಆಧುನಿಕ ತಂತ್ರಜ್ಞಾನವನ್ನೊಳಗೊಂಡ 24 ಬೈ 7 ಸೈಬರ್ ಸೆಕ್ಯೂರಿಟಿ ಆಪರೇಷನ್ಸ್ ಸೆಂಟರ್ ಸ್ಥಾಪಿಸಲಾಗುವುದು ಎಂದು ಹೇಳಿದರು.
ಡೆಲಿವರಿ ಬಾಯ್ಸ್ಗಳಿಗೂ ವಿಮೆ: ಕೈಗಾರಿಕಾ ಭದ್ರತಾ ಪಡೆಗೆ ಹೊಸದಾಗಿ 1000 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಲಾರಿ ಚಾಲಕರು ಮತ್ತು ಇ-ಕಾಮರ್ಸ್ ಡೆಲಿವರಿ ಸಿಬ್ಬಂದಿ ಮೃತರಾದರೆ 2 ಲಕ್ಷ ರೂಪಾಯಿ ವಿಮೆ ಹಾಗೂ ಅಪಘಾತದಲ್ಲಿ ಮೃತರಾದರೆ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡುವ ಮುಖ್ಯಮಂತ್ರಿ ವಿಮಾ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಘೋಷಿಸಿದರು.
ವಕೀಲರಿಗಾಗಿ ಕಾರ್ಪಸ್ ಫಂಡ್: ರಾಜ್ಯದ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮ ರೂಪಿಸಲು 100 ಕೋಟಿ ರೂಪಾಯಿ ಮೊತ್ತದ ಕಾರ್ಪಸ್ ಫಂಡ್ ರಚಿಸಲು ರಾಜ್ಯ ಸರ್ಕಾರದಿಂದ ಶೇ 50 ರಷ್ಟು ಮೊತ್ತ ನೀಡಲಾಗುವುದು ಎಂದು ಸಿಎಂ ಹೇಳಿದರು. ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ವಲಯಕ್ಕೆ 2023-24 ನೇ ಸಾಲಿನಲ್ಲಿ ಒಟ್ಟು 68.585 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.