ಬೆಂಗಳೂರು: ವಿಶ್ವಾಸಮತ ಯಾಚಿಸುವವರೆಗೂ ಕಲಾಪ ಬೇಡವೆಂದು ಹೊರ ಬಂದ ಬಿಜೆಪಿ ಶಾಸಕರು ಮತ್ತೆ ತಾವು ವಾಸ್ತವ್ಯ ಹೂಡಿದ್ದ ಯಲಹಂಕದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ಗೆ ಬಂದು ತಲುಪಿದ್ದಾರೆ.
ಇಂದು ಬೆಳಗ್ಗೆ ರಮಡ ರೆಸಾರ್ಟ್ನಿಂದ ಹೊರಟ ಶಾಸಕರು ವಿಧಾನಸೌಧದಲ್ಲಿ ನಡೆದ ಕಲಾಪದಲ್ಲಿ ಭಾಗವಹಿಸಿದ್ದರು. ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಪಡಿಸಬೇಕು. ಅಲ್ಲಿವರೆಗೂ ಕಲಾಪ ನಡೆಸಬಾರದೆಂದು ಪಟ್ಟು ಹಿಡಿದಿದ್ದರಿಂದ ಸ್ಪೀಕರ್ ಸದನವನ್ನು ಗುರವಾರಕ್ಕೆ ಮುಂದೂಡಿ ಅಂದೇ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಪಡಿಸಿದ್ದು, ಕಮಲ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿದೆ.
ನಾಳೆ ಸುಪ್ರೀಂ ಕೋರ್ಟ್ ತೀರ್ಪು ಹೊರ ಬೀಳಲಿದ್ದು, ಗುರುವಾರ ವಿಶ್ವಾಸಮತ ಯಾಚಿಸಲು ದಿನಾಂಕ ನಿಗದಿಪಡಿಸಿರುವುದರಿಂದ ಅಲ್ಲಿಯವರೆಗೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಇನ್ನೂ ನಾಲ್ಕು ದಿನಗಳ ಕಾಲ ಬಿಜೆಪಿ ಶಾಸಕರು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗುತ್ತಿದೆ.
ಶಾಸಕರೊಂದಿಗೆ ಸಭೆ:
ಇಂದು ಸಂಜೆ 6 ಗಂಟೆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕರೊಂದಿಗೆ ಸಭೆ ಏರ್ಪಡಿಸಲಾಗಿದ್ದು, ಮುಂದಿನ ರಾಜಕೀಯದ ರಣತಂತ್ರ ರೂಪಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.