ಬೆಂಗಳೂರು: ಮಹಾರಾಷ್ಟ್ರ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತದೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕರ್ನಾಟಕದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯ ಭರ್ತಿಯಾಗಿವೆ. ಅಣೆಕಟ್ಟು ಮತ್ತು ಜನರ ಸುರಕ್ಷತಾ ದೃಷ್ಟಿಯಿಂದ ನಾರಾಯಣಪುರ ಜಲಾಶಯದಿಂದ ಇಂದು 2,75,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ದೃಷ್ಟಿಯಿಂದ ಕೃಷ್ಣ ನದಿ ಪಾತ್ರದ ನಿಮ್ಮ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ, ಅಣೆಕಟ್ಟು ಅಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸುವಂತೆ ತೆಲಂಗಾಣ ಸಿಎಂಗೆ ಪ್ರವಾಹ ಮುನ್ನೆಚ್ಚರಿಕೆ ಕುರಿತು ಯಡಿಯೂರಪ್ಪ ಪತ್ರ ಬರೆದಿದ್ದಾರೆ.
![bsy](https://etvbharatimages.akamaized.net/etvbharat/prod-images/4050166_med.jpg)
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚಾಗಿ ನೀರು ಬಿಡುಗಡೆ ಹಿನ್ನೆಲೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ಗೂ ಸಿಎಂ ಯಡಿಯೂರಪ್ಪ ಪತ್ರ ರವಾನಿಸಿದ್ದಾರೆ.
ಕೊಯ್ನಾ ಜಲಾಶಯದ ನೀರಿನ ಹೊರ ಹರಿವು ಕಳೆದ ಎರಡು ದಿನಗಳಿಂದ ಹೆಚ್ಚುತ್ತಿದೆ. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೊಯ್ನಾ ಜಲಾಶಯದಿಂದ ಹೊರ ಹರಿವು ನಿಯಂತ್ರಿಸಿ, ನೀರು ಹರಿಸುವ ಮುನ್ನ ಕರ್ನಾಟಕದ ಅಧಿಕಾರಿಗಳಿಗೆ ತಿಳಿಸಿ. ಇನ್ಮುಂದೆ ಎರಡು ರಾಜ್ಯಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳೋಣ ಎಂದು ಪತ್ರದಲ್ಲಿ ಬಿಎಸ್ವೈ ಉಲ್ಲೇಖಿಸಿದ್ದಾರೆ.