ಬೆಂಗಳೂರು: ದೌರ್ಜನ್ಯದಿಂದ ಕೂಡಿದ ನಿಮ್ಮ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ನಿಮ್ಮ ಧೋರಣೆ ಬದಲಿಸಿಕೊಳ್ಳದಿದ್ದಲ್ಲಿ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ರೀತಿ ಸಂಯಮ ಕಳೆದುಕೊಳ್ಳುತ್ತಿರುವುದು ಇದು ಮೊದಲನೇ ಬಾರಿ ಏನೂ ಅಲ್ಲ. ಯಾವಾಗಲೂ ಅವರಿಗೆ ಜನರೆಂದರೆ, ಅದರಲ್ಲೂ ಉತ್ತರ ಕರ್ನಾಟಕದ ಜನತೆ ಅಂದರೆ ಆಗುವುದಿಲ್ಲ. ಅವರ ಗ್ರಾಮ ವಾಸ್ತವ್ಯ ಬೂಟಾಟಿಕೆ ಎಂದು ಮತ್ತೆ ಬಿಂಬಿಸಿದ್ದಾರೆ. ಮುಖ್ಯಮಂತ್ರಿಯವರು ಜನರ ಬಗ್ಗೆ ಇರುವ ಅದರಲ್ಲೂ ರಾಜ್ಯದಲ್ಲಿ ಬಿಜೆಪಿ ಗೆದ್ದ ಕಾರಣ ಸಂಯಮ ಕಳೆದುಕೊಳ್ಳುತ್ತಿರುವುದು ಅವರ ಕೊಳಕು ಮನಸ್ಸನ್ನು ಎತ್ತಿ ತೋರಿಸುತ್ತದೆ. ಮೋದಿಗೆ, ಬಿಜೆಪಿಗೆ ಮತ ಹಾಕಿದರು ಎಂಬ ಕಾರಣಕ್ಕೆ ಹೀಯಾಳಿಸಿ ಮಾತನಾಡುವುದು ಒಬ್ಬ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.
ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಜನರ ಭಾವನೆಗಳನ್ನು ಹತ್ತಿಕ್ಕಿ ನೀವು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನ ವಿರೋಧಿ ಕ್ರಮ. ಈ ರೀತಿ ದೌರ್ಜನ್ಯದಿಂದ ಕೂಡಿದ ನಿಮ್ಮ ಗ್ರಾಮ ವಾಸ್ತವ್ಯವನ್ನು ಜನ ಸಹಿಸುವುದಿಲ್ಲ. ನಿಮ್ಮ ವರ್ತನೆ ಕೂಡ ದೌರ್ಜನ್ಯದಿಂದ ಕೂಡಿದೆ. ಇದೇ ರೀತಿ ನೀವು ಜನರ ಮೇಲೆ ಮಾನಸಿಕ ದೌರ್ಜನ್ಯ ಮುಂದುವರಿಸಿದರೆ ಭಾರತೀಯ ಜನತಾ ಪಕ್ಷ ಸಹಿಸುವುದಿಲ್ಲ. ಈ ಬಗ್ಗೆ ನಾವು ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳುತ್ತೇವೆ. ಸಮಯ ಬಂದರೆ ನಿಮ್ಮ ಗ್ರಾಮ ವಾಸ್ತವ್ಯವೂ ನಡೆಯದಂತೆ ನೋಡಿಕೊಳ್ಳುತ್ತೇವೆ. ಜನವಿರೋಧಿ ಗ್ರಾಮ ವಾಸ್ತವ್ಯಕ್ಕೆ ನಮ್ಮ ಧಿಕ್ಕಾರ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.