ಬೆಂಗಳೂರು: ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಜಯನಗರದ ಬಿಡಿಎ ಕಾಂಪ್ಲೆಕ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಮುರಳೀಧರ ರಾವ್, ಮುರುಗೇಶ್ ನಿರಾಣಿ, ಪ್ರಭಾಕರ್ ಕೋರೆ, ಮಾಳವಿಕಾ ಅವಿನಾಶ್, ತಾರಾ ಅನುರಾಧ, ಬೆಂಗಳೂರು ಕೇಂದ್ರ ಸಂಸದರಾದ ಪಿಸಿ ಮೋಹನ್ ಹಾಗೂ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. ವಿಶೇಷ ಅಂದ್ರೆ ಬಿಜೆಪಿ ಸದಸ್ಯತ್ವ ನೋಂದಣಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರು, ಸೆಕ್ಯೂರಿಟಿ ಗಾರ್ಡ್ಗಳು ಹಾಗೂ ಆಟೋ ಚಾಲಕರು ಅಧಿಕೃತವಾಗಿ ಬಿಜೆಪಿಯ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಕೈಜೋಡಿಸಿದರು. ಬಿಜೆಪಿ ಬ್ರಾಹ್ಮಣರ ಪಕ್ಷ ಎಂಬ ಆರೋಪವಿದೆ. ಆದರೆ ನಮ್ಮ ಪಕ್ಷ ತಳಮಟ್ಟದ ಕಾರ್ಯಕರ್ತರಿಗೂ ಸಮಾನವಾದ ಅವಕಾಶವನ್ನು ನೀಡುತ್ತದೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟನೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಸದಸ್ಯತ್ವ ಅಭಿಯಾನದ ರಾಜ್ಯ ಸಂಚಾಲಕರಾದ ರವಿಕುಮಾರ್ ತಿಳಿಸಿದರು.
ಇನ್ನು, ಕಾರ್ಯಕ್ರಮದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸದ್ಯ ಬಹಳಷ್ಟು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಆದರೆ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ವಿಚಾರದಲ್ಲಿ ನಮ್ಮದೇನು ಪಾತ್ರವಿಲ್ಲ. ಮುಂದೆ ಏನು ಬೆಳವಣಿಗೆಯಾಗುತ್ತದೆ ಎಂದು ಕಾದು ನೋಡುತ್ತೇವೆ. ಯಾರ್ಯಾರು ರಾಜೀನಾಮೆ ಕೊಟ್ಟಿದ್ದಾರೆ ಅವರು ಮುಂದೆ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ರಾಜಕೀಯ ಭವಿಷ್ಯ ನಿಂತಿದೆ.
ಹೀಗಾಗಿ ನಾನು ಅಷ್ಟು ಬೇಗ ಪ್ರತಿಕ್ರಿಯೆ ಕೊಡುವುದಿಲ್ಲ. ಅಲ್ಲದೇ ಸದ್ಯದ ರಾಜಕೀಯ ಬೆಳವಣಿಗೆಗಳನ್ನು ನೀವು ಸಹ ನೋಡುತ್ತಿದ್ದೀರಿ. ನಮ್ಮ ರಾಜ್ಯದ ಜನರು ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಅನಿರೀಕ್ಷಿತವಾಗಿ ಮೈತ್ರಿ ಸರ್ಕಾರದ ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ. ಇದೆಲ್ಲವನ್ನು ನಾನು ಕೂಡ ಗಮನಿಸುತ್ತಿದ್ದೇನೆ. ಈ ವಿಚಾರವಾಗಿ ಸ್ಪೀಕರ್ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡುತ್ತೇನೆ ಎಂದು ತಿಳಿಸಿದರು.