ಬೆಂಗಳೂರು: ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಚುನಾವಣಾ ನಿವೃತ್ತಿ ಘೋಷಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಯ್ಕೆಯಲ್ಲಿ ಉಂಟಾಗಬಹುದಾದ ಬಂಡಾಯ ಶಮನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಈಶ್ವರಪ್ಪ ಪುತ್ರ ಕಾಂತೇಶ್ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡು ಪಕ್ಷದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದ್ದಾರೆ.
ಕಳೆದ ರಾತ್ರಿ ದೂರವಾಣಿ ಕರೆ ಮೂಲಕ ಈಶ್ವರಪ್ಪ ಪುತ್ರ ಕಾಂತೇಶ್ ಜೊತೆ ಮಾತುಕತೆ ನಡೆಸಿದ ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ ಇಂದು ಬೆಳಗ್ಗೆ ಕುಮಾರಕೃಪಾದಲ್ಲಿರುವ ಬಿ ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಕಾಂತೇಶ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು, ಯಡಿಯೂರಪ್ಪ ಕಾಂತೇಶ್ ಅವರ ಮನವೊಲಿಕೆ ಮಾಡುವ ಪ್ರಯತ್ನ ನಡೆಸಿದರು.
ಶಿವಮೊಗ್ಗ ನಗರದಲ್ಲಿ ನಿಮ್ಮನ್ನು ಸೇರಿದಂತೆ ಪಕ್ಷ ಬೇರೆ ಯಾರಿಗೆ ಬೇಕಾದರೂ ಟಿಕೆಟ್ ನೀಡಬಹುದು, ಆದರೆ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಿ, ನೀವಿನ್ನೂ ಯುವಕರು, ರಾಜಕೀಯದಲ್ಲಿ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ, ಉತ್ತಮ ರಾಜಕೀಯ ಭವಿಷ್ಯವಿದೆ ಎಂದು ಬಿ ಎಸ್ ಯಡಿಯೂರಪ್ಪ ಸಲಹೆ ನೀಡಿದರು. ನಂತರ ಬಿಜೆಪಿ ಕಚೇರಿಗೆ ತೆರಳಿದ ಕಾಂತೇಶ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೂ ಮಾತುಕತೆ ನಡೆಸಿದರು. ಹೈಕಮಾಂಡ್ ಸೂಚನೆಯಂತೆ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಮೂಡಿಗೆರೆ ಟಿಕೆಟ್ ಮಿಸ್: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಎಂಪಿ ಕುಮಾರಸ್ವಾಮಿ
ರಾಜ್ಯ ನಾಯಕರ ಜೊತೆ ಮಾತುಕತೆ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತೇಶ್, ನನ್ನ ತಂದೆ ಮತ್ತು ಕುಟುಂಬವನ್ನು ಬಿಜೆಪಿ, ಆರ್ಎಸ್ಎಸ್
ಸಂಸ್ಕಾರದಿಂದ ಬೆಳೆಸಿದೆ. ನನಗೆ ಸಂಪೂರ್ಣವಾದ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ. ಪಕ್ಷ ನಮ್ಮ ಕೈ ಬಿಡಲ್ಲ, ನನಗೆ ಒಂದು ಅವಕಾಶ ಸಿಗುವ ನಂಬಿಕೆಯಲ್ಲಿ ನಾನು ಇದ್ದೇನೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ, ನಮ್ಮ ತಂದೆ ನಿರ್ಧಾರಕ್ಕೆ ನಾವು ಎಲ್ಲರೂ ಬದ್ಧರಾಗಿದ್ದೇವೆ, ಸಾವಿರಾರು ಕಾರ್ಯಕರ್ತರಿಗೆ ನಮ್ಮ ತಂದೆ ಮಾದರಿ ಎಂದು ಹೇಳಿದರು.
ಒಂದು ವೇಳೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಟಿಕೆಟ್ ಕೊಡದಿದ್ದರೆ ಅದಕ್ಕೂ ಬದ್ಧ ಆಗಿರುತ್ತೇನೆ, ಸಾಯೋವರೆಗೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ.
ಮುಂದಿನ ದಿನಗಳಲ್ಲಿ ಒಳ್ಳೇದಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ ಎಂದರು. ಜಿಲ್ಲೆಯ ಹಿರಿಯ ನಾಯಕ ಆಯನೂರು ಮಂಜುನಾಥ್ ಎಲ್ಲೂ ಹೋಗಲ್ಲ ಅವರು ಬಿಜೆಪಿಯಲ್ಲೇ ಉಳಿಯುತ್ತಾರೆ. ಪಕ್ಷ ಯಾರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ ಆಯನೂರು ಬೆಂಬಲಿಸಲಿದ್ದಾರೆ ಎಂದು ಈಶ್ವರಪ್ಪ ಪುತ್ರ ಕಾಂತೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶೆಟ್ಟರ್ ಭವಿಷ್ಯ, ಈಶ್ವರಪ್ಪ ಉತ್ತರಾಧಿಕಾರಿ ಆಯ್ಕೆ ಕಗ್ಗಂಟು: 12 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದ ಬಿಜೆಪಿ..!