ಬೆಂಗಳೂರು: ಮಾಧ್ಯಮಗಳ ಜೊತೆ ಮಾತಾಡದಂತೆ ಶಾಸಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪಕ್ಷದ ಸೂಚನೆ ಮೇರೆಗೆ ಸಂಬಂಧಪಟ್ಟವರು ಮಾತ್ರ ಮಾತನಾಡಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.
ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಶಾಸಕರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ಸಭೆಯಲ್ಲಿ ನಡೆಯುವ ಚರ್ಚೆ ವಿಷಯಗಳು ಮಾಧ್ಯಮಗಳಿಗೆ ಸೋರಿಕೆಯಾಗದಂತೆ ನೋಡಿಕೊಳ್ಳಿ ಎಂದು ಶಾಸಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಪಕ್ಷದ ನಿರ್ಧಾರಗಳು, ಮುಂದಿನ ಯೋಜನೆಗಳು, ಚರ್ಚಿತ ವಿಷಯಗಳ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಎಲ್ಲರೂ ವಿಧಾನಸೌಧಕ್ಕೆ ತೆರಳಿ ಅಲ್ಲಿಯೇ ಶಾಸಕಾಂಗ ಪಕ್ಷದ ಸಭೆ ನಡೆಸೋಣ. ವಿಧಾನಸೌಧದಲ್ಲಿ ಏನು ಬೇಕಾದರೂ ನಡೆಯಬಹುದು. ಹಾಗಾಗಿ ಎಲ್ಲರೂ ವಿಧಾನಸೌಧಕ್ಕೆ ತೆರಳಿ ಎಂದು ಹೇಳಿದ್ದಾರಂತೆ.
ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲಿ ಶಾಸಕರು ವಿಧಾನಸೌಧದ ಕಡೆ ಮುಖ ಮಾಡುತ್ತಿದ್ದಾರೆ. ಬಿಎಸ್ವೈ ನಿವಾಸದಿಂದ ಹೊರಡುತ್ತಿರುವ ಶಾಸಕರು, ಮಾಧ್ಯಮಗಳ ಮುಂದೆ ಬರಲು ಹಿಂಜರಿಕೆ ಮಾಡಿದರು. ಸಾಹೇಬರ ಆರ್ಡರ್ ಆಗಿದೆ. ಮಾತಾಡಬೇಡಿ ಅಂದಿದಾರೆ ಎಂದು ಹೇಳಿ ಶಾಸಕರು ನಿರ್ಗಮಿಸಿದರು.
ಬಸವನಗೌಡ ಪಾಟೀಲ್ ಯತ್ನಾಳ್, ಗೋವಿಂದ ಕಾರಜೋಳ, ಕುಮಾರ್ ಬಂಗಾರಪ್ಪ ಮತ್ತಿತರರು ಪ್ರತಿಕ್ರಿಯೆಗೆ ನಿರಾಕರಿಸಿ ನಿರ್ಗಮಿಸಿದರು.